ಉಡುಪಿ: ತನ್ನ ಕರ್ತವ್ಯದ ಸಮಯದಲ್ಲಿ ಮದ್ಯಪಾನ ಮಾಡಿ ಶಾಲೆಯ ಜಗಲಿಯಲ್ಲಿ ಮಲಗಿ ಸುದ್ದಿಯಾಗಿದ್ದ ಪೆರ್ಡೂರು ಸಮೀಪದ ಅಲಂಗಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ನಾಯಕ್‌ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಡಿಸೆಂಬರ್ 27ರಂದು ಸಾಮಾಜಿಕ ಜಾಲ ತಾಣಗಳಲ್ಲಿ ವೀಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಬೆಳ್ಳಂಬೆಳಗ್ಗೆ ವಿಪರೀತ ಮದ್ಯಪಾನ ಮಾಡಿ ಶಾಲೆಯಲ್ಲಿ ಅಸಭ್ಯವಾಗಿ ವರ್ತಿಸಿದ ಬಗ್ಗೆ ಕಾಣಸಿಕ್ಕಿದ್ದಕ ಅದರಂತೆ ದೂರನ್ನು ನೀಡಿದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಡಿಡಿಪಿಐ ಗಣಪತಿ ಕೆ ತಿಳಿಸಿದ್ದಾರೆ.
ಬ್ರಹ್ಮಾವರ ವಲಯದ ಬಿಇಓ ಅವರನ್ನು ಅಲಂಗಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳುಹಿಸಿ ಘಟನೆಯ ಸತ್ಯಾಸತ್ಯತೆಯ ಅಧ್ಯಯನ ವರದಿ ಪಡೆದು ಅದರ ಆಧಾರದಲ್ಲಿ ತಪ್ಪಿತಸ್ಥರೆಂದು ಕಂಡು ಬಂದ ಕೃಷ್ಣ ಮೂರ್ತಿ ನಾಯಕ್‌ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಡಲಾಗಿದೆ ಎಂದು ಡಿಡಿಪಿಐ ಆದೇಶದಲ್ಲಿ ತಿಳಿಸಿದ್ದಾರೆ.
ಶಿಕ್ಷಕರು ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಇಲಾಖಾ ತನಿಖೆಯನ್ನು ಕಾಯ್ದಿರಿಸಿ ಕರ್ತವ್ಯದಿಂದ ಅಮಾನತುಗೊಳಿಸಿರುವುದಾಗಿ ಡಿಡಿಪಿಐ ಆದೇಶದಲ್ಲಿ ತಿಳಿಸಿದ್ದಾರೆ.
ಅಲಂಗಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ನಾಯಕ್‌ಡಿಸೆಂಬರ್ 27ರಂದು ಕಂಠಪೂರ್ತಿ ಮದ್ಯಪಾನ ಮಾಡಿ ಶಾಲೆಯ ಜಗಲಿಯಲ್ಲೇ ಮಲಗಿದ್ದರೆನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಅದರ ನಂತರ ಈ ರೀತಿಯ ಬೆಳವಣೆಗೆ ಕಂಡು ಬಂದಿದೆ.