ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಸಂಚರಿಸುತ್ತಿದ್ದ ಕಾರು ಅಪಘಾತವಾಗಿದ್ದು, ದೆಹಲಿಯಲ್ಲಿ ಮನೆಗೆ ನಿರ್ಗಮಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಪಂತ್ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿಯಾದ ರಭಸಕ್ಕೆ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದೆ ಎಂದು ಹೇಳಲಾಗಿದೆ. ದೆಹಲಿಯ ಏಮ್ಸ್ (AIMS) ಆಸ್ಪತ್ರೆಯಲ್ಲಿ ರಿಷಬ್ ಪಂತ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸ್ಥಿತಿ ಗಂಭೀರವಾಗಿದೆ. ತಲೆ, ಬೆನ್ನು ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ.
ದೆಹಲಿ-ಡೆಹ್ರಾಡೂನ್ ಹೆದ್ದಾರಿ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಮಾಹಿತಿ ಪಡೆದ ಪೊಲೀಸ್ (Police) ವರಿಷ್ಠಾಧಿಕಾರಿ ದೇಹತ್ ಸ್ವಪ್ನಾ ಕಿಶೋರ್ ಸಿಂಗ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಬ್ ಅವರ ಕಾರು ರೇಲಿಂಗ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಹಳ ಕಷ್ಟಪಟ್ಟು ಬೆಂಕಿಯನ್ನು ಹತೋಟಿಗೆ ತರಲಾಯಿತು ಎಂದು ಹೇಳಿದ್ದಾರೆ.
ಅಪಘಾತದ ಸಮಯದಲ್ಲಿ ರಿಷಭ್ ಪಂತ್ ಕಾರಿನಲ್ಲಿ ಒಬ್ಬರೇ ಇದ್ದರು ಎಂದು ಹೇಳಲಾಗಿದೆ. ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಪ್ರಕಾರ, ಉರಿಯುತ್ತಿರುವ ಕಾರಿನಿಂದ ಹೊರಬರಲು ಅವರು ವಿಂಡ್‌ಸ್ಕ್ರೀನ್ ಅನ್ನು ಒಡೆದಿದ್ದಾರೆ. ಇದರ ಜೊತೆಗೆ ಅವರು ತಲೆ, ಮೊಣಕಾಲು ಮತ್ತು ಮೊಣಕಾಲಿಗೆ ಗಾಯಗಳಾಗಿವೆ. ಪಂತ್ ಅವರ ಕಾಲು ಮುರಿದಿರುವ ಸಾಧ್ಯತೆಯಿರುವುದರಿಂದ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ.
ಜನವರಿಯಲ್ಲಿ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ. ಇತ್ತೀಚೆಗಷ್ಟೆ ಬಿಸಿಸಿಐ ಈ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿತ್ತು. ಇದರಲ್ಲಿ ರಿಷಭ್ ಪಂತ್ ಹೆಸರನ್ನು ಕೈಬಿಡಲಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.