ಶುಕ್ರವಾರ ಬೆಳಗ್ಗೆ ಭೀಕರ ಕಾರು ಅಪಘಾತಕ್ಕೊಳಗಾದ ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರು ಪ್ರಸ್ತುತ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯಿಂದ ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಪಂತ್ ಎಚ್ಚರ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂಬುದು ತಿಳಿದುಬಂದಿದೆ.
ಭೀಕರ ಅಪಘಾತದ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನ ಗಾಜನ್ನು ಹೊಡೆದು ಪಂತ್, ಕಾರಿನೊಳಗಿನಿಂದ ಹೊರಬಂದಿದ್ದಾರೆ. ಇದೀಗ, ಅಪಘಾತಕ್ಕೀಡಾದ ಬಳಿಕ ರಸ್ತೆ ಬದಿಯಲ್ಲಿ, ರಕ್ತದ ಮಡುವಿನಲ್ಲಿ ನರಳಾಡುತ್ತಿರುವ ಪಂತ್ ಅವರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.
ನಿದ್ರೆಗೆ ಜಾರಿದ್ದೆ ಅಪಘಾತಕ್ಕೆ ಕಾರಣ:
ರಿಷಬ್ ಪಂತ್ ಅವರ ಕಾರು ಮುಂಜಾನೆ 5:30 ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ರೂರ್ಕಿ ಬಳಿಯ ಮೊಹಮ್ಮದ್‌ಪುರ ಜಟ್‌ನಲ್ಲಿ ಈ ಘಟನೆ ನಡೆದಿದೆ. ‘‘ಕಾರನ್ನು ಡ್ರೈವ್ ಮಾಡುವಾಗ ನಿದ್ರೆಗೆ ಜಾರಿದೆ. ಇದರ ಪರಿಣಾಮವಾಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ’’ ಎಂದು ಸ್ವತಃ ಪಂತ್ ಅವರೇ ಹೇಳಿಕೆ ನೀಡಿದ್ದಾರೆ. ಕೂಡಲೇ ಪಂತ್ ಅವರನ್ನು ರೂರ್ಕಿ ಆಸ್ಪತ್ರೆಗೆ ಕರೆದುಯ್ಯಲಾಗಿದ್ದು, ಅಲ್ಲಿಂದ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿಕೆ ಪ್ರಕಾರ, ಅಪಘಾತದ ಸಮಯದಲ್ಲಿ ಕಾರಿನಲ್ಲಿ ಕ್ರಿಕೆಟಿಗ ಒಬ್ಬರೇ ಇದ್ದರು. ಬೆಂಕಿ ಹೊತ್ತಿಕೊಂಡ ನಂತರ ಕಾರಿನಿಂದ ಹೊರಬರಲು ಪಂತ್, ವಿಂಡ್‌ಸ್ಕ್ರೀನ್ ಒಡೆದಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಅಪಘಾತದ ಪರಿಣಾಮವಾಗಿ ಅವರ ತಲೆ, ಮೊಣಕಾಲು ಮತ್ತು ಮೊಣಕಾಲಿಗೆ ಗಾಯಗಳಾಗಿವೆ. ಅವರ ಕಾಲಿನಲ್ಲಿ ಮೂಳೆ ಮುರಿತ ಆಗಿರಬಹುದು. ಅವರು ಪ್ರಸ್ತುತ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರ ಹೇಳಿಕೆಯಲ್ಲಿ ಏನಿದೆ?
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವೆಬ್‌ಸೈಟ್ ಪ್ರಕಾರ, ಪಂತ್‌ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದ ಡಾ. ಸುಶೀಲ್ ನಗರ್ ಅವರ ಹೇಳಿಕೆಯ ಪ್ರಕಾರ, ಪಂತ್‌ಗೆ ತಲೆ ಮತ್ತು ಮೊಣಕಾಲು ಗಾಯಗಳಾಗಿವೆ. ಮೊದಲ ಎಕ್ಸ್-ರೇ ಪ್ರಕಾರ ಯಾವುದೇ ಮೂಳೆ ಮುರಿದಿಲ್ಲ. ಅಲ್ಲದೆ ಕಾರಿಗೆ ಬೆಂಕಿ ಹೊತ್ತಿಕೊಂಡರೂ ಸಹ ಪಂತ್ಗೆ ಎಲ್ಲಿಯೂ ಸುಟ್ಟ ಗಾಯಗಳಾಗಿಲ್ಲ. ಹಣೆಯ ಮೇಲೆ, ಎಡಗಣ್ಣಿನ ಮೇಲೆ, ಮೊಣಕಾಲು ಮತ್ತು ಹಿಂಭಾಗದಲ್ಲಿ ಗಾಯಗಳಾಗಿವೆ ಎಂದು ವರದಿಯಾಗಿದೆ.