ಮಂಗಳೂರು: ಸಹೃದಯಿ, ಸಮಾಜಸೇವಕ, ಹತ್ತೂರ ಸುತ್ತ ಮನೆಮಾತಾದ “ನಂಡೆ ಪೆಂಙಳ್” ಅಭಿಯಾನದ ಸ್ಥಾಪಕಾಧ್ಯಕ್ಷ, ದ.ಕ ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ನ ಅಧ್ಯಕ್ಷ ರಾದ ನೌಶಾದ್ ಹಾಜಿ ಸೂರಲ್ಪಾಡಿ ಯವರ ನಿಧನಕ್ಕೆ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಅಪಾರ ಸಂತಾಪ ವ್ಯಕ್ತಪಡಿಸಿದೆ.
ಮೃತರು ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಸ್ಥೆಯ ಸದಸ್ಯರಾದ ಸಂಶುದ್ದೀನ್ ಸೂರಲ್ಪಾಡಿಯವರ ಹಿರಿಯ ಸಹೋದರರಾಗಿದ್ದಾರೆ.
ನಂಡೆ ಪೆಂಙಳ್’(ನನ್ನ ಸಹೋದರಿ) ಎಂಬ ಅಭಿಯಾನದ ಮೂಲಕ ನೂರಾರು ಬಡ ಕುಟುಂಬದ ಯುವತಿಯರ ವಿವಾಹಕ್ಕೆ ಸಹಕಾರಿಯಾಗಿದ್ದ ನೌಶಾದ್ ಹಾಜಿ ಜನರಿಗೆ ಹತ್ತಿರವಾಗಿದ್ದರು. ತಮ್ಮ ವೃತ್ತಿ ಜೀವನದ ಕಡೆಗೆ ಮಾತ್ರವೇ ಯೋಚನೆ ಮಾಡದೇ, ಪೇ ಬ್ಯಾಕ್ ಟು ಸೊಸೈಟಿ ಅನ್ನೋ ಮಾದರಿಯಲ್ಲಿ ಸಮಾಜಕ್ಕೆ ನೆರವಾದ ನೌಶಾದ್ ಹಾಜಿ ಸೂರಲ್ಪಾಡಿಗಾಗಿ ಸಾರ್ವಜನಿಕರು ಜಾತಿ, ಧರ್ಮ ಬೇಧ ಮರೆತು ಆಗಮಿಸಿ ಅಂತಿಮ ದರ್ಶನ ಪಡೆದು ಕಣ್ಣೀರಾದರು.
ನೌಷಾದ್ ಹಾಜಿ ಅವರು ಹುಟ್ಟು ಹಾಕಿದ್ದ ನಂಡೆ ಪೆಂಙಳ್ ಅಭಿಯಾನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆಯಾಗದ ಎಷ್ಟೋ ಹೆಣ್ಣು ಮಕ್ಕಳ ಜೀವನಕ್ಕೆ ಬೆಳಕಾಗಿತ್ತು. ಬಡ ಕುಟುಂಬಗಳಿಗೆ ಆಸರೆಯಾಗಿತ್ತು.
ಬಡ ಜನರ ಸೇವೆಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ, ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಸಾಮಾಜಿಕ ಮುಂದಾಳು, ಸದಾ ಹಸನ್ಮುಖಿ ವ್ಯಕ್ತಿತ್ವದ ನೌಶಾದ್ ಹಾಜಿ ಸೂರಲ್ಪಾಡಿ ಯವರ ನಿದನವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ನಂಡೆ ಪೆಂಙಳ್ ಅಭಿಯಾನಕ್ಕೆ ಸಮರ್ಥ ನೇತ್ರತ್ವ ನೀಡಿ ಅದೆಷ್ಟೋ ಬಡ ಕುಟುಂಬಕ್ಕೆ ಬೆಳಕಾಗಿದ್ದ ಧೀಮಂತ ವ್ಯಕ್ತಿತ್ವವನ್ನು ಕಳೆದುಕೊಂಡ ಸಮುದಾಯವು ಇಂದು ಬಡವಾಗಿದೆ ಎಂದು ಸಂಸ್ಥೆಯ ಸ್ಥಾಪಕಧ್ಯಕ್ಷರಾದ ಸಿರಾಜ್ ಪರ್ಲಡ್ಕ ರವರು ಸಂತಾಪ ಪ್ರಕಟಣೆಯಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.
ನೌಶಾದ್ ರವರ ಅವರ ಅಗಲಿಕೆಯು ಸಮಾಜ, ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬ, ಬಂಧು-ಬಳಗದವರಿಗೆ ಅಗಲಿಕೆಯ ದುಃಖ ಸಹಿಸುವ ಸಹನೆ ತಾಳ್ಮೆ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ, ಅವರು ಮಾಡಿದ ಸತ್ಕರ್ಮಗಳು ಪರಲೋಕದ ಬದುಕಿನಲ್ಲಿ ಅವರಿಗೆ ಉನ್ನತ ದರ್ಜೆಯನ್ನು ಅಲ್ಲಾಹನು ನೀಡಿ ಅನುಗ್ರಹಿಸಲಿ ಎಂದು ಸಂಸ್ಥೆಯ ಅಧ್ಯಕ್ಷರಾದ ಷರೀಫ್ ವಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ