dtvkannada

ಉಪ್ಪಿನಂಗಡಿ: ಕಳೆದ ಐದು ವರ್ಷಗಳಿಂದ ವಾಟ್ಸಾಪ್ ಗ್ರೂಪ್ ಮುಖಾಂತರ ಕಾರ್ಯಚರಿಸುತ್ತಿರುವ ಮುಖಪುಟದ ಬರಹಗಾರ ಸ್ನೇಹಿತರ ಬಳಗ ಪೆನ್ ಪಾಯಿಂಟ್ ಇದರ ಐದನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು, ಪ್ರಸ್ತುತ ಕಾರ್ಯಕ್ರಮದ ಭಾಗವಾದ ಸಾರ್ವಜನಿಕ ಕಥಾ ಸ್ಪರ್ಧೆಯಲ್ಲಿ ನಿಷ್ಮಾ ಇರ್ಷಾದ್ ಪ್ರಥಮ ಸ್ಥಾನಿಯಾಗಿ ಲುಕ್ಮಾನ್ ಅಡ್ಯಾರ್ ದ್ವಿತೀಯ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ನಿಶ್ಮಾ ಇರ್ಷಾದ್ ರವರ ವೃದ್ದಾಶ್ರಮ ಎಂಬ ಕಥೆ ಪ್ರಥಮ ಸ್ಥಾನ ಪಡೆದಿದ್ದು, ಲುಕ್ಮಾನ್ ಅಡ್ಯಾರ್ ರವರ ಮುನಾರಿನ ನೀಲಕುರುಂಜಿ ಹೂವುಗಳು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಅದೇ ರೀತಿ 5 ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಅವಿಜ್ಞಾನಿ(ನಿಝಾಂ) ಬರೆದ “ತುಕ್ರ ಮತ್ತು ಕೇಸರಿ ಬೈರಾಸು”
ಸಾರಾ ಅಲಿ ಪರ್ಲಡ್ಕ ರವರ “ಒತ್ತೆ ಇಟ್ಟ ಕಾಸಿನ ಡಾಬು”
ಮರ್ಯಮ್ ಇಸ್ಮಾಯಿಲ್ ಉಳ್ಳಾಲ ರವರ “ವಿಶೇಷ ಗಿಫ್ಟ್”.
ಸಲೀಮ್ ಅಬ್ಬಾಸ್ ವಲಾಲ್ ರವರ “ಪುತ್ತುಞಿಯ ಡಕೋಟ ಎಕ್ಸ್ ಪ್ರೆಸ್”.
ಸಬೀಯ ರುಮೀಜ್ ಕುಶಾಲನಗರ ರವರ “ಎಲ್ಲಿರುವೆ” ಎಂಬ ಒಟ್ಟು 5 ಮಂದಿ ಕಥೆಗಾರರ ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜೇತರಿಗೆ ನಗದು ಮತ್ತು ಸ್ಮರಣಿಕೆಯನ್ನು ದಿ. 14/01/2023 ರಂದು ಶನಿವಾರ ರಾಯಲ್ ಗಾರ್ಡನ್ ಬೀಚ್ ರೆಸಾರ್ಟ್ ಉಳ್ಳಾಲ’ದಲ್ಲಿ ನಡೆಯುವ “ಪೆನ್ ಪಾಯಿಂಟ್ ಸ್ನೇಹ ಸಂಗಮ”ದಲ್ಲಿ ನೀಡಿ ಗೌರವಿಸಲಾಗುವುದು ಎಂದು ಬಳಗದ ಸ್ಥಾಪಕಧ್ಯಕ್ಷರಾದ ಸತ್ತಾರ್ ಪರಪ್ಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕಥೆಯನ್ನು ಓದಿ.
👇👇👇👇👇

ಪ್ರಥಮ ಸ್ಥಾನ ಪಡೆದ ಕಥೆ:

“ವೃದ್ದಾಶ್ರಮ”

ಮೊನ್ನೆ ಮೊನ್ನೆಯಷ್ಟೇ ಮಗ ಖರೀದಿಸಿ ತಂದಿದ್ದ ಹೊಸ ಆರಾಮ್ ಚೇರ್ ಮೇಲೆ ಆಸಿನಳಾಗಿದ್ದ ಫಾತಿಮಾಳಿಗೆ, ಮಗ ಹೇಳಿದ ಆ ಒಂದು ಮಾತಿನಿಂದ ಹುಲಿ ಎದೆಗೆ ಎರಗಿದ ಅನುಭವವಾಗಿತ್ತು. ಹೊಸ ಆರಾಮ್ ಚೇರನ್ನು ಮಗ ತನಗಾಗಿಯೇ ತಂದಿದ್ದಾನೆ ಅಂದುಕೊಂಡಿದ್ದ ಆಕೆಗೆ ʻನಾಳೆ ವೃದ್ಧಾಶ್ರಮಕ್ಕೆ ಹೋಗೋಣ. ಬೇಗ ರೆಡಿಯಾಗು. ಎಲ್ಲಾ ಏರ್ಪಾಟು ಮಾಡಿಸಿದ್ದೇನೆ. ಬೆಳಿಗ್ಗೆ ಬೇಗ ಬರೋದಿಕ್ಕೆ ಹೇಳಿದ್ದಾರೆʼ ಅಂತ ಕಡ್ಡಿ ತುಡ್ಡಾಗುವಂತೆ ಹೇಳಿದ್ದ ಕಾಸೀಮನ ಮಾತಿನಿಂದ ಫಾತಿಮಾಳಿಗೆ ಕುಳಿತ ನೆಲ ಕುಸಿದಂಥ ಅನುಭವವಾಗಿತ್ತು.

ಊಹೂಂ.. ಊಹಿಸಿಯೇ ಇರಲಿಲ್ಲ. ಹೆತ್ತು ಹೊತ್ತು ಸಾಕಿ ಸಲುಹಿದ ಮಗ ಇಂಥದ್ದೊಂದು ಮಾತು ಹೇಳಬಹುದೆಂದು ಫಾತಿಮಾ ಊಹಿಸಿಯೇ ಇರಲಿಲ್ಲ. ಆದರೇನು ಮಾಡುವುದು? ಕೊನೆಗೂ ಕಾಸೀಮ್ ತನ್ನನ್ನು ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿಯೇ ಬಿಟ್ಟಿದ್ದ. ʻಇಲ್ಲ ನನ್ನ ಮಗ ಹಾಗೇ ಮಾಡುವುದಿಲ್ಲ. ಅವನು ಎಲ್ಲರಂತಲ್ಲ. ಹೆತ್ತ ತಾಯಿಯನ್ನು ಕಷ್ಟ ಪಟ್ಟು, ಅಲ್ಲಲ್ಲ ಇಷ್ಟ ಪಟ್ಟು ನೋಡಿಕೊಳ್ತಾನೆ ಅಂತಾನೇ ಊರವರೆಲ್ಲಾ ಮಾತಾಡಿಕೊಳ್ತಾರೆ. ಹೀಗಿರುವಾಗ ನನ್ನ ಮಗ ನನ್ನೊಂದಿಗೆ ತಮಾಷೆ ಮಾಡಿರಬೇಕು ಅಷ್ಟೇʼ ಅಂತ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ ಫಾತಿಮಾಳಿಗೆ ʻಅತ್ತೆಗೆ ನೋಡು ಹರಕಲು ಮಂಚ, ಸೊಸೆಗೆ ನೋಡು ಮುಕ್ಕಾಲು ಚಾಪೆʼ ಎನ್ನುವ ಹಿರಿಯ ಜಾನಪದರು ಕಟ್ಟಿದ್ದ ಲಾವಣಿಯೂ ನೆನಪಾಗಿತ್ತು.

ಭಾರವಾದ ಹೆಜ್ಜೆಯನ್ನೂರಿದ ಫಾತಿಮಾ ಬಂದು ಮಲಗಿದರೆ, ನಿದ್ರೆಯೂ ಮುನಿಸಿಕೊಂಡಿತ್ತೇನೋ? ಎತ್ತ ಹೊರಳಿದರೂ ನಿದ್ದೆ ಬರಲೇ ಇಲ್ಲ. ಅದೇಗೆ ಬಂದೀತು ನಿದ್ದೆ? ಪಾಪ ಮುದಿ ಜೀವ! ಆಗೊಮ್ಮೆ ಈಗೊಮ್ಮೆ ಕೆಲವು ಸುದ್ದಿಗಳನ್ನು ಕೇಳಿದ್ದೀತು, ಮಕ್ಕಳು ಹೆತ್ತ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದನ್ನು. ಆದರೆ ತನಗೂ ಒಂದೊಮ್ಮೆ ಇಂತಹದ್ದೊಂದು ದುರ್ಗತಿ ಬಂದೀತೆಂದು ಕನಸಲ್ಲೂ ಎಣಿಸಿರಲಿಕ್ಕಿಲ್ಲ. ಮಗ ಕಾಸೀಮ್ ಒಳ್ಳೆಯವನೇ. ಪಾಪ! ಮದುವೆಯಾಗುವ ಮುನ್ನ ತನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಅವನ ಅಪ್ಪ ಸತ್ತಾಗ ಸಣ್ಣ ವಯಸ್ಸಿನವನಾಗಿದ್ದರೂ, ಕುಟುಂಬ ಸಾಗಿಸುವ ಹೊಣೆ ಹೊತ್ತುಕೊಂಡಿದ್ದ. ದೂರದ ದೇಶಕ್ಕೋಗಿ ಒಂದಿಷ್ಟು ಸಂಪಾದಿಸಿ ಇಬ್ಬರು ಅಕ್ಕಂದಿರ, ಮೂವರು ತಂಗಿಯರ ಮದುವೆ ಮಾಡಿಕೊಟ್ಟಿದ್ದ. ಪರದೇಶದಲ್ಲಿ ದುಡಿದ ಒಂದಷ್ಟು ದುಡ್ಡನ್ನು ಉಳಿಸಿಕೊಂಡು ಬಂದು ಊರಲ್ಲಿ ಬಟ್ಟೆ ವ್ಯಾಪಾರ ಆರಂಭಿಸಿ ಭರ್ಜರಿ ವ್ಯಾಪಾರ ಮಾಡಿದ್ದ. ದುಡಿದ ದುಡ್ಡಲ್ಲೇ ಒಂದು ಬೈಕ್ ಖರೀದಿಸಿ, ಮೊನ್ನೆ ಮೊನ್ನೆಯಷ್ಟೇ ರಂಜಾನ್ ಹಬ್ಬಕ್ಕೆ ತನಗೆ ಅಂತ ಬರೋಬ್ಬರಿ 5 ಜತೆ ಹೊಸ ಬ್ರ್ಯಾಂಡೆಡ್ ಸೀರೆಯನ್ನು ಬೆಂಗಳೂರಿನಿಂದ ತಂದು ಕೊಟ್ಟಿದ್ದ. ಹೊಸ ಬೈಕ್ ನಲ್ಲಿ ಊರೂರು ಸುತ್ತಾಡಿಸಿ ಮೊದಲ ಬಾರಿಗೆ ಪ್ರವಾಸ ಮಾಡಿಸಿದ್ದ. ʻಅಮ್ಮಾ.. ನೆಲದ ಮೇಲೆ ಜಾಸ್ತಿ ಕೂರಬೇಡ. ಬೆನ್ನು ನೋವು ಬರುತ್ತದೆʼ ಅಂತ ಹೇಳಿದ್ದ ಕಾಸೀಮ್, ಮರುದಿನವೇ ಹೊಸ ಆರಾಮ್ ಚೇರ್ ಕೂಡಾ ತಂದು ಕೊಟ್ಟಿದ್ದ.

ʻಮಗ ಒಳ್ಳೆಯವನೇ…ʼ ಆದರೂ ಹೆಂಡತಿಯ ಮುಂದೆ ತಾಯಿಯನ್ನು ತಿರಸ್ಕರಿಸಿದ ಮಕ್ಕಳ ಕಥೆಗಳನ್ನೂ ಫಾತಿಮಾ ಬಹಳಷ್ಟು ಕೇಳಿದ್ದಳು. ಮಗ ಒಳ್ಳಯವನೇ, ಪಾಪ! ಎಲ್ಲಾ ಸೊಸೆಯದ್ದೇ ಕಾರುಬಾರು. ಇಲ್ಲಿತನಕ ತೋರಿಸಿದ ಪ್ರೀತಿ ಬರೀ ನಾಟಕವೇ? ʻಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ನಾನು, ನಿಮ್ಮನ್ನು ಅತ್ತೆಯಾಗಿ ಅಲ್ಲ, ನನ್ನ ಹೆತ್ತ ತಾಯಿಯಂತೆ ನೋಡಿಕೊಳ್ಳುತ್ತೇನೆʼ ಎಂದಿದ್ದ ಸೊಸೆ ಸುಮಯ್ಯಾಳ ಆ ಮಾತು ನೆಂಟರ ಮುಂದೆ ನಡೆಸಿದ ಹೈಡ್ರಾಮಾನ? ನಾಳೆ ಬರಲಿರುವ ದಿನವನ್ನು ಕಲ್ಪಿಸಿಕೊಳ್ಳುತ್ತಾ ಮಲಗಿದ್ದ ಫಾತಿಮಾಳ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗಿತ್ತು.
ಇಂತಹ ಹೊತ್ತಲ್ಲಿ ಗಂಡನಿರಬೇಕಿತ್ತು ಅಂತ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹೊರಳಾಡುತ್ತಿದ್ದ ಫಾತಿಮಾಳಿಗೆ
ʻದುಡ್ಡು ಕೊಟ್ಟರೆ ಬೇಕಾದ್ದೂ ಸಿಗತೈತಿ ಈ ಜಗದಲಿ ಕಾಣೋ..
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ
ತಮ್ಮಾ.. ಮರಳಿ ಬರುವಳೇನೋ..
ಒಂಭತ್ತು ತಿಂಗಳ ಸಂಕಟ ನೀಡಿ ಹೊಟ್ಯಾಗ ಬೆಳೆದಲ್ಲೋ
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟು ಕಷ್ಟ ಕೊಟ್ಟಿಯಲ್ಲೋʻ
ಎನ್ನುವ ಖ್ಯಾತ ಜಾನಪದ ಹಾಡು ತಲೆಯೊಳಗೆ ಸುಳಿದು ಹೋಗಿತ್ತು. ಆ ಕ್ಷಣವೇ ಮಗ ಕಾಸೀಮ್ ನನ್ನು ಬದುಕಿಸುವುದೋಸ್ಕರ ಕೈ ಮೈ ಸುಟ್ಟಕೊಂಡಿದ್ದ ಹಳೇ ಘಟನೆ ಫಾತಿಮಾಳ ಸ್ಮೃತಿಪಟಲವನ್ನು ಕೆದಕಿತ್ತು.

ಒಬ್ಬನೇ ಮಗನಲ್ಲವೇ? ತಂದೆ ಖಾದರ್ ಮತ್ತು ತಾಯಿ ಫಾತಿಮಾ ಕಾಸೀಮ್ ನನ್ನು ತುಂಬಾ ಅಕ್ಕರೆಯಿಂದ ಬೆಳೆಸಿದ್ದರು. ಹೀಗಾಗಿ ಕಾಸೀಮ್ ಗೆ ಕಷ್ಟವೆಂದರೇನು ಅಂತ ಗೊತ್ತಾಗುತ್ತಲೇ ಇರಲಿಲ್ಲ. ಹೂವು ತಾಗಿದರೂ ಮುಳ್ಳು ಚುಚ್ಚಿತೆನ್ನುವ ಅನುಭವವಾಗುವಂತೆ ಬೆಳೆಯುತ್ತಿದ್ದ ಅವನೊಮ್ಮೆ, ಶಾಲೆಯಲ್ಲಿ ಆಟವಾಡಿ ಮನೆಗೆ ಬಂದಾಗ, ಆಡಿ ಬಂದು ಬಾಯಾರಿದ ಕಂದನಿಗೆ ನೀರು ಕೊಟ್ಟ ತಾಯಿ ಫಾತಿಮಾ, ಕಾಸೀಮ್ ನ ಗಲ್ಲದಿಂದ, ತಲೆಯ ನೆತ್ತಿಯವರೆಗೂ ನವಿರಾಗಿ ಸವರಿದಳು. ʻಏನಮ್ಮಾ.. ನಿನ್ನ ಕೈ ಮುಳ್ಳಿನ ತರ, ಅದೆಷ್ಟು ಒರಟೊರಟಾಗಿದೆ. ಇನ್ನೊಮ್ಮೆ ಕೈ ತೊಳೆದುಕೊಂಡು ಬಂದು ನನ್ನ ಮುಟ್ಟು ಅಂದು ಬಿಟ್ಟ ಕಾಸೀಮ್. ತನ್ನ ಮಾತಿನಿಂದ ತಾಯಿ ಬೇಸರ ಮಾಡಿಕೊಂಡಳು ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಅವನು, ಮಂಚದ ಮೇಲೆ ಒರಗಿದ್ದ ತಂದೆಯ ತೋಳಿಗೆ ತಲೆ ಇಟ್ಟು ಮಲಗಿಕೊಂಡ.
ʻಅಪ್ಪಾ… ಯಾಕೆ ಅಮ್ಮನ ಕೈಗಳು ಹಾಗೆ? ಮೈಮೇಲೆ ಅಲ್ಲಲ್ಲಿ ಕಪ್ಪು ಕಲೆಗಳಿದ್ದಾವಲ್ಲ. ಅದ್ಯಾಕೆ?ʼ ಕಾಸೀಮ್ ಕೇಳಿದ್ದ. ಅಪ್ಪ ಖಾದರ್ ಹೇಳಲು ಶುರು ಮಾಡಿದ.
ʻಆಗ ನೀನಿನ್ನೂ 5 ವರ್ಷದವನಿದ್ದೆ ಏನೋ? ಬಹುಷಃ ನಿನಗೆ ಮುಂಜಿಯೂ ಆಗಿರಲಿಕ್ಕಿಲ್ಲ. ಸಣ್ಣ ವಯಸ್ಸಿನಲ್ಲೇ ಅತೀವ ತುಂಟನಾಗಿದ್ದ ನೀನು, ನಮಗಿಬ್ಬರಿಗೂ ಹೇಳದೆಯೇ ಮನೆಯ ಪಕ್ಕದಲ್ಲಿದ್ದ ಗುಡಿಸಲಿಗೆ ಹೋಗಿ, ಆಟವಾಡುತ್ತಿದ್ದೆ. ಗುಡಿಸಲಿಗೆ ಹಠಾತ್ತನೆ ಬೆಂಕಿ ಬಿದ್ದಿತ್ತು. ಕಿಡಿ ಕಂಡೊಡನೆ ಗುಡಿಸಲಿನಲ್ಲಿದ್ದ ಆ ಗುಡಿಸಲಿನ ಹುಡುಗಿ, ಜೀವ ಉಳಿಸಿಕೊಳ್ಳುವ ಧಾವಂತದಲ್ಲಿ ಹೊರಗೆ ಹಾರಿ ಬಂದಿದ್ದಳು. ಬೆಂಕಿಯ ಜಳಕ್ಕೆ ನೀನು ಅಳಲಾರಂಭಿಸಿದ್ದೆ. ಕಿರುಚುತ್ತಾ ಹೊರಗೆ ಓಡಿ ಬಂದ ಆ ಹುಡುಗಿಯ ಕಿರುಚಾಟವನ್ನು ಕಂಡ ಫಾತಿಮಾಳ ರಕ್ತ ಕಪ್ಪಿಟ್ಟಿತ್ತು. ಆಗ ನಾನಂತೂ ಮನೆಯಲ್ಲಿರಲಿಲ್ಲ. ಏನು ಮಾಡಬೇಕೆಂದು ತೋಚದ ನಿನ್ನಮ್ಮ ಫಾತಿಮಾ, ಇದ್ದ ಒಬ್ಬ ಮಗನನ್ನು ಉಳಿಸಿಕೊಳ್ಳುವುದಕ್ಕಾಗಿ ಸೀರೆ ಬಿಚ್ಚಿ ಗುಡಿಸಲಿನೊಳಗೆ ಹೋಗಿ, ನಿನ್ನನ್ನು ಬಾಚಿ ತಬ್ಬಿಕೊಂಡು, ಅಲ್ಲಿಯೇ ಹಣೆಗೆ ಒಂದು ಮುತ್ತನ್ನಿಟ್ಟು ಹೊರಗೆ ಕರೆದುಕೊಂಡು ಬಂದಿದ್ದಳು. ನಿನ್ನನ್ನು ಉಳಿಸಿಕೊಳ್ಳುವ ಈ ಹೋರಾಟದಲ್ಲಿ ನಿನ್ನ ತಾಯಿಗೂ ಬೆಂಕಿ ತಾಗಿತ್ತು. ಅಂದು ಅವಳ ಕೈಮೈ ಒರಟಾಗಿ, ಕಪ್ಪು ಕಲೆ ಮೂಡದೇ ಇದ್ದಿದ್ದರೆ ಇಂದು ನೀನು ನಮ್ಮ ಜೊತೆಗೆ ಇರುತ್ತಿರಲಿಲ್ಲʼ ಎನ್ನುತ್ತಾ ಅಪ್ಪ ಖಾದರ್ ಮಗ ಕಾಸೀಮ್ ನ ಬಾತಲೆಯನ್ನು ಸವರಿದ್ದ.

ತಾಯಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ತನ್ನನ್ನು ಉಳಿಸಿದ ಕಥೆ ಕೇಳಿಸಿಕೊಂಡ ಕಾಸೀಮ್ ಕಣ್ಣೀರಾಗಿದ್ದ.

ಹೀಗೆ ಒಂದರ ನಂತರ ಮತ್ತೊಂದರಂತೆ ತನ್ನ ಮತ್ತು ಮಗನ ನಡುವಿನ ಘಟನೆಗಳು ಫಾತಿಮಾಳ ತಲೆ ಸುತ್ತ ಸುದರ್ಶನ ಚಕ್ರದಂತೆ ತಿರುಗಲಾರಂಭಿಸಿದವು. ಇಷ್ಟು ದಿನ ತಾಯಿಗೆ ಮುದ್ದಿನ ಮಗನಾಗಿದ್ದವನು, ನಾಳೆ ತಾಯಿಯನ್ನೇ ವೃದ್ಧಾಶ್ರಮಕ್ಕೆ ಬಡಿದಟ್ಟುತ್ತಿದ್ದಾನೆ ಎನ್ನುವುದನ್ನು ಕಲ್ಪಿಸಿಕೊಂಡಾಗಲಂತೂ, ಆ ಎಲ್ಲಾ ಹಳೇಯ ಘಟನೆಗಳು ಭೀಷ್ಮನ ಮೇಲೆ ಬಿಟ್ಟ ಬಾಣಗಳಂತೆ ಬಂದು ಫಾತಿಮಾಳ ಎದೆ ಇರಿಯುತ್ತಿದ್ದವು. ಒಂದೊಂದು ಘಟನೆಯನ್ನೂ ನೆನಪಿಸಿಕೊಂಡಾಗ ಆಗುತ್ತಿದ್ದ ಸಂಕಟದ ನಡುವೆಯೇ ನಿದ್ದೆಗೆ ಜಾರಿದ್ದ ಫಾತಿಮಾಳಿಗೆ ಬೆಳಗಾಗಿದ್ದು ಅರಿವಿಗೆ ಬಂದಿರಲೇ ಇಲ್ಲ.

ʻಅತ್ತೆ, ಎದ್ದೇಳಿ ಬೇಗ. ಇನ್ನೇನೂ ಹೊರಡೋ ಟೈಮ್ ಆಯ್ತು. ನಾನೆಲ್ಲಾ ರೆಡಿ ಮಾಡಿದ್ದೇನೆ. ನೀವು ಸೀರೆಯುಟ್ಟುಕೊಂಡು ರೆಡಿಯಾದ್ರಾಯ್ತುʼ ಎಂದ ಸುಮಯ್ಯಾ ಹೊಸ ಸೀರೆಯನ್ನು ಅತ್ತೆ ಮಲಗಿದ್ದ ಮಂಚದ ಪಕ್ಕ ಇಟ್ಟಳು. ಒಂದು ರಾತ್ರಿಯನ್ನು ಸಂಕಟದಲ್ಲಿ ಒಂದು ಯುಗದಂತೆ ಕಳೆದಿದ್ದ ಫಾತಿಮಾಳಿಗೆ, ವೃದ್ಧಾಶ್ರಮಕ್ಕೆ ಕಳಿಸುವ ಸೊಸೆಯ ಉತ್ಸಾಹವನ್ನು ಕಂಡು ಜೋರಾಗಿ ಅತ್ತು ಬಿಡಬೇಕೆಂದು ಅನ್ನಿಸಿತು. ಸೊಸೆ ಎದುರು ದೌರ್ಬಲ್ಯ ತೋರಬಾರದೆಂದುಕೊಂಡು ತಡೆದುಕೊಂಡಳು. ಅವರಿಗೆ ಬೇಡವಾದ ಮೇಲೆ ತಾನು ಎಲ್ಲಿದ್ದರೇನು? ಹೇಗಿದ್ದರೇನು? ಅಂತ ಮನಸ್ಸು ಗಟ್ಟಿ ಮಾಡಿಕೊಂಡರೂ, ಆಗಾಗ ಪರಿತಪಿಸುತ್ತಿತ್ತು. ತೀರಿಕೊಂಡ ಗಂಡನ ನೆನಪು ಕ್ಷಣಕ್ಷಣಕ್ಕೂ ಆಗುತ್ತಿತ್ತು. ಎಲ್ಲಾ ನೋವನ್ನು ನುಂಗಿಕೊಂಡ ಫಾತಿಮಾ ಒಲ್ಲದ ಮನಸ್ಸಿನಿಂದ ಹಾಸಿಗೆಯಿಂದ ಎದ್ದು ಸ್ನಾನದ ಕೋಣೆಯತ್ತ ಹೆಜ್ಜೆ ಹಾಕಿ, ಸ್ನಾನ ಮಾಡಿ, ಹೊಸ ಸೀರೆಯುಟ್ಟುಕೊಂಡು ಬಂದು ಆರಾಮ್ ಚೇರ್ ಮೇಲೆ ಕುಳಿತುಕೊಂಡಳು.

ಹೊರಗಿನಿಂದ ಬಾಡಿಗೆಗೆ ಕಾರನ್ನು ತೆಗೆದುಕೊಂಡು ಬಂದ ಕಾಸೀಮ್, ಮನೆಯೊಳಗೆ ಬಂದು ʻಬಾರಮ್ಮಾ…ʼ ಎಂದು ಕರೆದಾಗ, ಮನಸ್ಸು ಭಾರವಾಗಿ ಎದೆ ಧಸಕ್ ಎಂದಿತ್ತು. ಬಿಗಿದ ಗಂಟಲಿನಿಂದ ಹೊರಸೂಸಿ ಬರುತ್ತಿದ್ದ ಅವ್ಯಕ್ತ ಆಕ್ರಂದನ ಕಲ್ಲು ಹೃದಯದವರನ್ನೂ ತಲ್ಲಣಿಸಿ ಬಿಡುತ್ತಿತ್ತು. ಆದರೂ ಮಗ ಮತ್ತು ಸೊಸೆಯ ಮುಂದೆ ದೌರ್ಬಲ್ಯವನ್ನು ತೋರಿಸಿಕೊಳ್ಳಬಾರದೆಂಬ ಹಠ ಫಾತಿಮಾಳ ಮನಸ್ಸಲ್ಲಿ ಮನೆ ಮಾಡಿತ್ತು. ಹೀಗಾಗಿ ಯಾಂತ್ರಿಕವಾಗಿ ಹಿಂಬಾಲಿಸಿದಳು. ಸೊಸೆ ದೊಡ್ಡ ಲಗೇಜ್ ಬ್ಯಾಗನ್ನು ಕಾರ್ ನ ಡಿಕ್ಕಿಯಲ್ಲಿಟ್ಟಳು. ಪ್ರಯಾಣದುದ್ದುಕ್ಕೂ ತಾನು ವೃದ್ಧಾಶ್ರಮದ ಪಾಲಾಗುತ್ತಿರುವದನ್ನು ಕಲ್ಪಿಸಿಕೊಂಡ ಫಾತಿಮಾಳಿಗೆ ಕಣ್ಣಲ್ಲಿ ಕಣ್ಣೀರು ತೊಟ್ಟಿಕ್ಕುತ್ತಿದ್ದರೆ, ಮುಂದೆ ಕೂತ ಮಗ ಮತ್ತು ಸೊಸೆಯನ್ನು ಕಂಡು ರಕ್ತ ಕುದ್ದು ಬರುತ್ತಿತ್ತು. ಅರ್ಧ ಗಂಟೆಯ ಪ್ರಯಾಣದ ಬಳಿಕ ಬಾಡಿಗೆ ಕಾರು ವೃದ್ಧಾಶ್ರಮದ ಬಳಿ ಬಂದು ನಿಂತಿತ್ತು.

ಹಿಂದಿನ ಸೀಟಿನಲ್ಲಿ ಕುಳಿತಿದ್ದ ಫಾತಿಮಾಳನ್ನು ಇಳಿಸಿ, ‘ಬಾ ಅಮ್ಮಾ…’ ಅಂತ ಮಗ ಕಾಸೀಮ್ ಹೆಗಲು ಬಳಸಿದಾಗ ಮಡುಗಟ್ಟಿದ್ದ ಕಣ್ಣೀರು ತಣ್ಣಗೆ ಕೆನ್ನೆಗಿಳಿದಿತ್ತು. ಕುದಿಯುತ್ತಿದ್ದ ರೋಷ, ಧುಮ್ಮಿಕ್ಕಿ ಬಂದಿತ್ತು. ಯಾರಿಗೂ ಕಾಣದಂತೆ ಸೆರಗಿನಿಂದ ಕಣ್ಣೊರೆಸಿಕೊಂಡ ಫಾತಿಮಾ, ಮಗ ತೋರಿಸುವ ಈ ಅಕ್ಕರೆ ಎಲ್ಲಾ ಬೂಟಾಟಿಕೆ ಎಂದುಕೊಂಡಳು. ‘ವೃದ್ಧಾಶ್ರಮ ಅಂದರೇನೇ ಹಾಗೇ. ಇಲ್ಲಿ ನನ್ನವರಿಲ್ಲ, ತನ್ನವರಿಲ್ಲ ಎಂಬಂತ ಒಂದು ರೀತಿಯ ಸ್ಮಶಾನ. ಅನಾಥರಲ್ಲದ ಅನಾಥರಾಗಿ ಜೀವಿಸಬೇಕು. ಬದುಕಿದರೆ ಭಾವನೆಗಳನ್ನು, ಕುಟುಂಬದ ಪ್ರೀತಿಯನ್ನು ಕಳೆದುಕೊಂಡು ಬದುಕಬೇಕು. ಜೀವಂತ ಹೆಣಗಳಿರುವ ಈ ಜಾಗಕ್ಕೆ ಬರಬೇಕಾದರೆ, ಸೂತಕದ ಮನೆಯಲ್ಲಿ ಸಿಂಗಾರ ಎಂಬಂತೆ ಈ ಹೊಸ ಸೀರೆ, ಬಾಡಿಗೆ ಕಾರು, ಜೊತೆಗೆ ಮಗನ ಬೂಟಾಟಿಕೆಯ ಕಾಳಜಿ ಎಲ್ಲವೂ ವ್ಯರ್ಥ’ ಎಂದು ಗೊಣಗುತ್ತಿದ್ದ ಫಾತಿಮಾ, ಒಲ್ಲದ ಮನಸ್ಸಿನಿಂದ ಕಾರಿನಿಂದ ಇಳಿದಿದ್ದಳು. ಮನಸ್ಸು ಭಾರವಾಗಿದ್ದಾಕೆಗೆ ಕಾರಿನ ಡೋರನ್ನು ತೆಗೆಯುವುದು ಸಹ ಪರ್ವತವನ್ನು ಪುಡಿಗಟ್ಟಿಸಿದಷ್ಟೇ ಕಠಿಣವಾದ ಕೆಲಸದಂತೆ ಭಾಸವಾಗಿತ್ತು.

ವೃದ್ಧಾಶ್ರಮದೊಳಕ್ಕೆ ತೆರಳುವ ಹಾದಿಯಲ್ಲಿ, ಆಫೀಸು ರೂಮಿನ ಹೊರಗೆ ಹಾಕಿದ್ದ ಬೆಂಚಿನ ಮೇಲೆ ಹಲ್ಲು ಉದುರಿದ್ದ, ಕಣ್ಣು ಸರಿಯಾಗಿ ಕಾಣದ್ದಕ್ಕೆ ಕಪ್ಪು ಗ್ಲಾಸು ಹಾಕಿಕೊಂಡು ಕೂತಿದ್ದ ಮೂರ್ನಾಲ್ಕು ವೃದ್ಧರು ತನ್ನತ್ತ ಕನಿಕರದಿಂದ ದೃಷ್ಟಿ ಹಾಯಿಸಿದಂತೆ ಭಾಸವಾಗಿತ್ತು ಫಾತಿಮಾಳಿಗೆ. ಆಫೀಸಿನೊಳಗೆ ಪ್ರವೇಶಿಸಿದ ಮಗ ಕಾಸೀಮ್ ಮತ್ತು ಸೊಸೆ ಸುಮಯ್ಯಾ ವೃದ್ಧಾಶ್ರಮದ ಮೇಲ್ವಿಚಾರಕನೊಂದಿಗೆ ಒಂದತ್ತು ನಿಮಿಷಗಳ ಕಾಲ ಚರ್ಚೆಯನ್ನು ನಡೆಸಿದರು. ಮೊದಲೇ ಮಾತುಕತೆಯಾಗಿದ್ದರಿಂದ ಬೇಗ ಮಾತು ಮುಗಿದಿದೆ ಎಂದುಕೊಂಡಳು ಫಾತಿಮಾ. ಹೆಚ್ಚಿನ ಸಂಭಾಷಣೆ ಬಹುತೇಕ ಇಂಗ್ಲೀಷ್ ಭಾಷೆಯಲ್ಲಿದ್ದರಿಂದ ಏನೊಂದು ಅರ್ಥವಾಗಿರಲಿಲ್ಲ. ಆದರೆ ಮನಸ್ಸು ಕ್ಷಣಕ್ಷಣಕ್ಕೂ ಪತರುಗುಟ್ಟುತ್ತಿತ್ತು. ‘ಮಗ ಮತ್ತು ಸೊಸೆಗೆ ನಾನೇನೂ ಕಿರಿಕಿರಿ ಮಾಡಿದವಳಲ್ಲ. ಅದು ಬೇಕು, ಇದೂ ಬೇಕು ಅಂತ ಸತಾಯಿಸಿದವಳಲ್ಲ. ಅವರಿಗೆ ಬೇಡವಾಗುವಂತಹ ಒಂದೇ ಒಂದು ಕೆಲಸವನ್ನು ನಾನು ಇದುವರೆಗೆ ಮಾಡಿಯೇ ಇಲ್ಲ. ಆಕಸ್ಮಾತ್ ಅವರಿಗೆ ನನ್ನಿಂದಾಗಿ, ಯಾವುದಾದರೂ ವಿಷಯದಲ್ಲಿ ಭಂಗ ಉಂಟಾಗಿದ್ದರೆ ನೇರವಾಗಿ ಹೇಳಬಹುದಿತ್ತು. ಅವರು ಕೊಟ್ಟಿದನ್ನು, ಹೆಚ್ಚಿಗೆ ಬೇಡದೆ ಕೊಟ್ಟಷ್ಟು ತಿಂದುಕೊಂಡು, ಮನೆಯ ಯಾವುದೋ ಒಂದು ಮೂಲೆಯಲ್ಲಿ ಬಿದ್ದುಕೊಂಡಿರುತ್ತಿದ್ದೆ.’ ಎಂದು ಫಾತಿಮಾಳ ಮನಸ್ಸು ಕ್ಷಣಕ್ಕೊಮ್ಮೆ ಪರಿತಪಿಸುತ್ತಲೇ ಇತ್ತು.

ಅಲ್ಲಿಂದ ಎಲ್ಲರೂ ಆಶ್ರಮದೊಳಗೆ ಹೋದರು. ಭಾರವಾದ ಹೆಜ್ಜೆಗಳನ್ನೂರಿದ ಫಾತಿಮಾ ಅವರನ್ನು ಹಿಂಬಾಲಿಸಿದಳು. ಒಳಗೆ ದೊಡ್ಡದೊಂದು ಹಾಲ್. ಅಲ್ಲಿ ಸುಮಾರು 50 ರಿಂದ 60 ಹಿರಿಜೀವಗಳು ಕಣ್ಣು ಪಿಳಿಪಿಳಿ ಬಿಡುತ್ತಾ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಕೂತಿದ್ದವು. ವೃದ್ಧಾಶ್ರಮದ ಮೇಲ್ವಿಚಾರಕ ಸ್ವಲ್ಪ ಮುಂದೆ ಹೋಗಿ ಭಾಷಣ ಮಾಡುವ ಶೈಲಿಯಲ್ಲಿ ನಿಂತುಕೊಂಡಿದ್ದನ್ನು ಗಮನಿಸಿದ ಫಾತಿಮಾ, ‘ಬಹುಷಃ ನನ್ನನ್ನು ಹೊಸ ಮೆಂಬರ್ ಅಂತ ಪರಿಚಯಿಸಬಹುದು’ ಎಂದುಕೊಳ್ಳುತ್ತಾ ಮನದಲ್ಲೇ ಮಂಡಿಗೆ ತಿನ್ನತೊಡಗಿದ್ದಳು.

ಆದರೆ ಅದು ಹಾಗಾಗಲಿಲ್ಲ.
ಫಾತಿಮಾಳ ನಿರೀಕ್ಷೆ ಹುಸಿಯಾಗಿತ್ತು. ಒಮ್ಮೆಲೇ ಢಮ್ ಅಂತ ಬಲೂನುಗಳು ಒಡೆದ ಸದ್ದು ಮೊಳಗಿತ್ತು. ಅಲ್ಲಿದ್ದವರೆಲ್ಲಾ ಒಮ್ಮೆಲೇ ಒಂದೇ ರಾಗದಲ್ಲಿ ‘ಹ್ಯಾಪಿ ಬರ್ತ್ ಡೇ ಟೂ ಯೂ’ ಎಂದು ಹಾಡತೊಡಗಿದಾಗ ಗರಡುಗಂಬದಂತೆ ನಿಂತುಕೊಂಡಿದ್ದ ಫಾತಿಮಾ ದಿಗ್ಭ್ರಮೆಗೊಂಡಿದ್ದಳು. ಗೊಂದಲಗಳೆಲ್ಲ ಗೋಜಲಾಗಿದ್ದವು.

“ಕ್ಷಮಿಸಮ್ಮಾ… ನಿನಗೆ ಸರ್ಪ್ರೈಸ್ ಕೊಡೋಣ ಅಂತ ಮೊದಲೇ ಹೇಳಲಿಲ್ಲ” ಎಂದು ಮಗ ಕಾಸೀಮ್ ಹೆಗಲ ಮೇಲೆ ಕೈ ಹಾಕಿದಾಗ ಫಾತಿಮಾಳಿಗೆ ದುಃಖ ಉಮ್ಮಳಿಸಿ ಬಂದಿತ್ತು. ಆನಂದಭಾಷ್ಪ ಹೊರಬರಲು ತವಕಿಸುತ್ತಿತ್ತು. ಹತ್ತಿರ ಬಂದ ಸುಮಯ್ಯಾ “ನಾನು ಹೇಳಿದೆ ಅತ್ತೆ ಇವರಿಗೆ, ಮೊದಲೇ ಹೇಳಿಬಿಡಿ ಇಲ್ಲದಿದ್ದರೆ ಶಾಕ್ ಆದೀತು ಅಂತ. ಆದರೆ ಇವರು ನನ್ನ ಬಾಯಿ ಮುಚ್ಚಿಸಿದರು’ ಅಂತ ಚಿಕ್ಕ ಮಗು ತಾಯಿಯ ಬಳಿ ದೂರು ಹೇಳುವ ಹಾಗೇ ಹೇಳಿದಳು.
ಫಾತಿಮಾ ಮಗನ ಮತ್ತು ಮಗಳಂತಹ ಸೊಸೆಯ ಪ್ರೀತಿ ಕಂಡು ನಿರಾಳನಾಗಿ ನಕ್ಕಳು.

“ಬಾ ಅಮ್ಮಾ.. ಈ ಸಲ ನಿನ್ನ ಹುಟ್ಟು ಹಬ್ಬವನ್ನು ಆಶ್ರಮದಲ್ಲಿ ಮಾಡೋಣ ಅಂತ ನಿರ್ಧಾರ ಮಾಡಿದ್ವಿ. ಕೇಕ್ ಕಟ್ ಮಾಡಿದ ಮೇಲೆ, ಇಲ್ಲಿರುವವರಿಗೆಲ್ಲಾ ನಿನ್ನ ಕೈಯಾರೆ ಹೊಸಬಟ್ಟೆ ಮತ್ತು ಸಿಹಿತಿಂಡಿ ಕೊಡು. ಎಲ್ಲಾ ಜೊತೆಯಾಗಿ ಊಟ ಮಾಡಿ, ಇವತ್ತೊಂದಿನ ಇಲ್ಲಿಯೇ ಕಾಲ ಕಳೆದು, ಸಂಜೆ ಮನೆಗೆ ಹೋಗೋಣ” ಎಂದಾಗ, ಕಾಸೀಮ್ ನನ್ನು ಬಾಚಿ ತಬ್ಬಿಕೊಂಡು ಅತ್ತು ಬಿಡಬೇಕೆನ್ನಿಸಿತ್ತು ಫಾತಿಮಾಳಿಗೆ.

ಹುಟ್ಟಿದ ದಿನವನ್ನೂ ನೆನಪಿನಲ್ಲಿಟ್ಟುಕೊಳ್ಳದ ಫಾತಿಮಾಳಿಗೆ ಕೇಕ್ ಕಟ್ ಮಾಡುವುದು ಕೂಡ ಮುಜುಗರವೇ ಆಗಿತ್ತು. ಮುಂದೆ ಬಂದ ಸೊಸೆ ಸುಮಯ್ಯಾ, ಅತ್ತೆಯ ಕೈ ಹಿಡಿದು ಕೇಕ್ ಕಟ್ ಮಾಡಿಸಿದ್ದಳು. ಹಿಂದೆ “ಹ್ಯಾಪಿ ಬರ್ತ್ ಡೇ ಟು ಯೂ” ಎನ್ನುವ ಉದ್ಘಾರ ಒಂದೇ ರಾಗದಲ್ಲಿ ಕೇಳಿ ಬಂದಿತ್ತು.

ಫಾತಿಮಾ ನಾಚಿ ನೀರಾಗಿದ್ದಳು.

ಇನ್ನೇನೂ ವೃದ್ಧಾಶ್ರಮದಲ್ಲಿದ್ದ ಹಿರಿಯರಿಗೆ ಹೊಸ ಬಟ್ಟೆ, ಸಿಹಿ ತಿಂಡಿ ಹಂಚಬೇಕೆನ್ನುವಷ್ಟರಲ್ಲಿ ಅಡ್ಡಬಂದ ಆಶ್ರಮದ ಮೇಲ್ವಿಚಾರಕ, ಹುಟ್ಟುಹಬ್ಬದ ಕುರಿತು, ಆಶ್ರಮದಲ್ಲಿರುವ ಹಿರಿಯರ ಕುರಿತು ಒಂದೆರಡು ಮಾತುಗಳನ್ನಾಡಬೇಕೆಂದು ವಿನಂತಿಸಿದ.

ಮಗ ಮತ್ತು ಸೊಸೆ ಕೊಟ್ಟ ಶಾಕ್ ನಿಂದ ಮುಜುಗರದ ಮುದ್ದೆಯಾಗಿದ್ದ ಫಾತಿಮಾ ಅಷ್ಟೇನೂ ಪ್ರಖರ ಮಾತುಗಾರ್ತಿಯಲ್ಲ. ಅಕ್ಕಪಕ್ಕದ ಮನೆಯ ನಾಲ್ಕಾರು ಹೆಂಗಸರೊಂದಿಗೆ ಸಂಜೆ ಹೊತ್ತು ಮನೆಯ ಮುಂದಿನ ಕಟ್ಟೆ ಮೇಲೆ ಕುಳಿತು ಭಾಷಣ ಬಿಗಿದ ಅನುಭವವಿತ್ತಷ್ಟೇ.

ಮೇಲ್ವಿಚಾರಕ ಮತ್ತೊಮ್ಮೆ ಒತ್ತಾಯ ಮಾಡಿದ.

“ಅಲ್ಲೊಂದು ಇಲ್ಲೊಂದು ಘಟನೆಗಳನ್ನು ಕೇಳಿದ್ದೆ. ಸೊಸೆ ಬಂದಾಕ್ಷಣ ತಂದೆ ತಾಯಿ ಮಕ್ಕಳಿಗೆ ಗೌಣವಾಗುತ್ತಾರೆ ಅಂತ. ಆದರೆ ನನ್ನ ಮಗ ಹಾಗಲ್ಲ, ಸೊಸೆಯೂ ಇನ್ನೊಬ್ಬರಂತಲ್ಲ. ನಾವು ದಿನನಿತ್ಯ ಅತ್ತೆ – ಸೊಸೆಯಂದಿರ ಜಗಳದ ಸುದ್ದಿಯನ್ನೇ ಕೇಳುತ್ತೇವೆ, ನೋಡುತ್ತೇವೆ. ಆದರೆ ಆ ಕಲಹಗಳಿಗಿಂತಲೂ ಹೆಚ್ಚಾಗಿ ಅತ್ತೆಗೆ ಸ್ವಂತ ಮಗಳಂತೆ, ಸೊಸೆಗೆ ಹೆತ್ತ ತಾಯಿಯಂತೆ ಪರಸ್ಪರ ಪ್ರೀತಿಸುತ್ತಾ ಬದುಕುತ್ತಿರುವ ಅತ್ತೆ – ಸೊಸೆಯಂದಿರು ನಮ್ಮ ಸಮಾಜದಲ್ಲಿದ್ದಾರೆ. ಹೀಗಾಗಿ ಕಲಹದ ಸುದ್ದಿಗಳಿಗಿಂತಲೂ, ಪ್ರೀತಿ ಸಾರುವ ಸುದ್ದಿಗಳೇ ಹೆಚ್ಚೆಚ್ಚು ಪ್ರಚಾರವಾಗಲಿ. ಹೀಗಾದರೆ, ವಯಸ್ಸಾದಾಗ ಹೆತ್ತವರನ್ನು ದೂರವಿಡುವ ಕೆಲವು ಮಕ್ಕಳೂ ಸಹ ಸುಧಾರಿಸಿಕೊಳ್ಳಬಹುದು. ಆಗ ವೃದ್ಧಾಶ್ರಮಗಳು ಸಹ ಉಪಯೋಗಕ್ಕೆ ಬಾರದೇ ಮುಚ್ಚಿಕೊಂಡು ಹೋಗಬಹುದು” ಎಂದ ಫಾತಿಮಾಳ ಕಣ್ಣಂಚಲ್ಲಿ ಮಡುಗಟ್ಟಿದ್ದ ಕಣ್ಣೀರು ಕೆನ್ನೆಗಿಳಿದಿತ್ತು.

“ಹೌದೌದು ವೃದ್ಧಾಶ್ರಮಗಳು ಇಲ್ಲವಾಗಬೇಕು” ಎಂದಿತ್ತು, ಮಕ್ಕಳಿಂದ ದೂರವಾಗಿ ನೊಂದು, ನೋವುಂಡು ಆಶ್ರಮದ ಮೂಲೆಯಲ್ಲಿ ಕುಳಿತಿದ್ದ ಮುದಿ ಜೀವ.

ನೆರೆದಿದ್ದವರೆಲ್ಲರ ಚಪ್ಪಾಳೆಯ ಕರಡತಾನ ಮುಗಿಲು ಮುಟ್ಟಿತ್ತು.

ದ್ವಿತೀಯ ಸ್ಥಾನ ಪಡೆದ ಕಥೆ👇🏻

“ಮೂನಾರಿನ ನೀಲಕುರಿಂಜಿ ಹೂಗಳು”

ಸೂರ್ಯ ಎದ್ದೇಳುವ ಹೊತ್ತು. ನಸು ಮುಂಜಾನೆಯ ಚಳಿಯನ್ನು ನಿರ್ಲಕ್ಷಿಸಿ ಅವನು ಕಾರ್ ಓಡಿಸುತ್ತಿದ್ದಾನೆ. ಪಕ್ಕದಲ್ಲಿರುವ ಹೆಂಡ್ತಿ ಪೆಚ್ಚು ಮೋರೆ ಹೊತ್ಕೊಂಡು ಕೂತಿದ್ದಾಳೆ. ಬ್ಯಾಕ್ ಸೀಟಲ್ಲಿರುವ ಅವನ ಐದು ವಯಸ್ಸಿನ ಮಗಳು ಎಲ್ಲಾ ಮರೆತು ನಿದ್ರೆಗೆ ಜಾರಿದ್ದಾಳೆ. ಇಕ್ಕೆಲಗಳಲ್ಲೂ ಎದ್ದುನಿಂತ ಚಾ ತೋಟದ ಮಧ್ಯೆಯಿರುವ ಕಿರಿದಾದ ರಸ್ತೆ, ಹೊರಗೆ ಮಳೆಯಂತೆ ಮಂಜು ಸುರಿಯುತ್ತಿದೆ. ಕಾರಿನ ವೈಪರ್ ಕೆಲಸ ಮಾಡುತ್ತಿದ್ದರೂ ಮಂಜು ಕಾರಣ ಹೊರಗಿನ ನೋಟ ಅಷ್ಟೊಂದು ವ್ಯಕ್ತವಲ್ಲ. ಜಲಹನಿಯಾಗಿ ಬದಲಾದ ಮಂಜು ಸೈಡು ಮಿರರುಗಳಲಿ ಕೆಳಕ್ಕೆ ಮುಖ ಮಾಡಿ ಜಾರುತಿತ್ತು. ‘ರಾಜ್..ನಿನಗೇನಾಗಿದೆ, ಇದೇನು ಹೊಸಹುಚ್ಚು?! USA ಯಿಂದ ವೆಡ್ಡಿಂಗ್ ಆನಿವರ್ಸರಿಗೆ ಕಡಲು ದಾಟಿ ಈ ಬೆಟ್ಟ ತಪ್ಪಲಿಗೆ ಬರಬೇಕಿತ್ತೇನೋ? ಅದೆಂತ ಸರ್ಪೈಸ್ ನನಗಿಲ್ಲಿ ಕೊಡ್ಲಿಕ್ಕಿದ್ದೀಯೋ ಏನೋ?! ಒಂದೂ ಹೊಳೆಯುತಿಲ್ಲ’ ಎಂದಳು ಮಡದಿ. ಅವಳ ಮಾತಿಗೆ ಕಿವಿಗೊಡದೆ ರಾಜ್ ಮೌನವಾಗಿಯೇ ಕಾರೋಡಿಸುತ್ತಿದ್ದಾನೆ. ಆ ಯಾತ್ರೆ ಕೊನೆಯಾದದ್ದು ಮೂನಾರಿನ ಒಂದು ರೆಸಾರ್ಟಿನ ಮುಂದೆಯಾಗಿತ್ತು. ಕಾರ್ ಪಾರ್ಕ್ ಮಾಡಿ ಮೇಲೆ ಬಂದ ರಾಜ್ ರೂಮ್ ಬುಕ್ ಮಾಡಿದನು. ಫ್ರೆಶ್ಶಾಗಿ , ಬ್ರೇಕ್ಫಾಸ್ಟಿನ ಹೊತ್ತಿಗಾಗಲೇ ಸೂರ್ಯ ಮೈಕೊಡವಿ ಎದ್ದು ನಗಲು ಪ್ರಾರಂಭಿಸಿದ್ದ. ಅಲ್ಲಿಂದ ರಾಜ್ ಹೆಂಡತಿ ಮಗಳ ಕೈ ಹಿಡಿದು ಆ ಬೆಟ್ಟದ ಮಧ್ಯೆಯಿರುವ ಕವಲು ದಾರಿಯಲ್ಲಿ ಕೆಳಗಿಳಿದ. ಹೆಂಡ್ತಿಯ ಮುಖವಿನ್ನೂ ಅರಳಿರಲಿಲ್ಲ. ಇಲ್ಲದ ಲೀವ್ ಪಡ್ಕೊಂಡು ಕಡಲುದಾಟಿ ಇಲ್ಲಿಗೆ ಬಂದದ್ರಲ್ಲಿ ಅವಳಿಗಂತೂ ಕಿಂಚಿತ್ತೂ ಸಂತಸವಿರಲಿಲ್ಲ. ‘ಅನಿತಾ…ಕಮ್ ಹಿಯರ್’ ರಾಜ್ ನ ಕರೆಗೆ ಅನಿತಾ ಓಗೊಟ್ಟು ರಾಜ್ ಬೆರಳು ತೋರಿದ ನೇರಕ್ಕೆ ದೃಷ್ಟಿ ನೆಟ್ಟಾಗ ಪಕ್ಕನೆ ಅವಳ ಮುಖವೊಮ್ಮೆ ಬಿರಿಯಿತು. ಅವಳು ಅವನನ್ನು ಅಪ್ಪಿದಳು,ಕೆನ್ನೆಗೊಂದು ಮುತ್ತೂ ಕೊಟ್ಟಳು. ‘ಐ ಲವ್ ಯೂ ರಾಜ್’ ಸಂತಸ ಸೂಚಕದ ಅವಳ ಮಾತುದುರಿತು. ಬೆಟ್ಟ ತಪ್ಪಲಿಡೀ ನೀಲಿಮಯವಾಗಿ ಸ್ವರ್ಗವಾಸನೆ ಮೂಗನ್ನು ಎಚ್ಚರಿಸುತಿದೆ. ಸ್ವರ್ಗಕ್ಕೇ ನೀಲಿ ಬಣ್ಣವೋ ಎಂದು ತೋಚುವಂತ ಚೆಂದ. 12 ವರ್ಷಕ್ಕೊಮ್ಮೆ ಜುಲೈಯಿಂದ ಅಕ್ಟೋಬರ್ ವರೆಗೆ ಮಾತ್ರ ಅರಳುವ ‘ನೀಲಕುರಿಂಜಿ ಹೂ’ ಭೂ ಹೃದಯದಿಂದ ಎದ್ದು ತಪ್ಪಲನ್ನು ಸುಂದರಿಯಾಗಿಸಿದೆ. ‘ವಾಹ್ ಎಂಥಹ ಸೀನರಿ’ ಎನ್ನುತ್ತಾ ಅವಳು ಕ್ಯಾಮರ ಹಿಡ್ಕೊಂಡು ಮಗಳ ಬೆರಳು ಜೋಡಿಸಿ ಆ ಹೂಗಳಾಳಕ್ಕೆ ನಡೆಯುತ್ತಾಳೆ.

ಆದರೆ ಆ ಸಂತಸ ರಾಜ್ ನ ಮುಖದಲ್ಲಿಲ್ಲ. ಅವನ ಕಣ್ಣುಗಳು ಮತ್ತ್ಯಾರದೋ ಹುಡುಕಾಟದಲ್ಲಿತ್ತು. ಮಧ್ಯಾಹ್ನ ವೇಳೆ ಬಿಸಿಲು ಸ್ವಲ್ಪ ಶಕ್ತಿಯಾಯಿತು. ನೆರಳಿಗೊಂದು ಮರವೂ ಇಲ್ಲ. ಬೆವರಿಳಿಯುವ ಹೊತ್ತಿಗೆ ಅವಳು ಮಗಳ ಕೈ ಹಿಡಿದು ಮೇಲೆ ಬಂದಳು. ‘ರಾಜ್ ನಾವೀಗ ರೂಮಿಗೆ ಹೋಗಿ ,ಸಂಜೆವೇಳೆ ಬಂದರಾಯ್ತು’ ಎಂದಳು. ಅದಕ್ಕೆ ರಾಜ್ ‘ಒಕೆ ಒಕೆ.. ನೀ ಮಗಳನ್ನು ಕರೆದುಕೊಂಡು ಹೋಗು, ನಾ ನಿನ್ನ ಹಿಂದೆಯಿದ್ದೇನೆ’ ಎಂದನು. ‘ಒಕೆ ಆದ್ರೆ ಲಂಚ್ ನ ಮುನ್ನ ರೂಮಿಗೆ ತಲುಪಬೇಕು’ ಆಜ್ಞಾಪಿಸಿದಂತೆ ಹೇಳಿದಳು. ರಾಜ್ ತಲೆಯಾಡಿಸಿದ. ಅವಳು ಹೊರಟದ್ದೂ ರಾಜ್ ಹೂವಿನಂಗಳದ ಆಳಕ್ಕಿಳಿದ. ಕಣ್ಣೆತ್ತುವ ದೂರದವರೆಗೂ ಹರಡಿದ ಬೆಟ್ಟದಲಿ ನಗುತಾ ಹಬ್ಬಿನಿಂತ ನೀಲಕುರುಂಜಿ ಹೂಗಳು ಅವನ ನೆನಪನ್ನು 12 ವರ್ಷದ ಹಿಂದಕ್ಕೋಡಿಸಿತು. ಆ ನೆನಪಿನೋಟ ನಿಂತದ್ದು ನೀಲ ಕೇಶವುಳ್ಳ ಬೆಕ್ಕುಕಣ್ಣಿನ ಸುಂದರಿ ಮತ್ತು ತನ್ನ ಸರ್ವಸ್ವವೂ ಆಗಿದ್ದ ಆನ್ ಮಾಥೀವ್ಸ್ ಎಂಬ ‘ಆನಿ’ಯ ಬಳಿಯಾಗಿತ್ತು.

ಪ್ರಿ ಡಿಗ್ರಿಗೆ ಕಲಿಯುವಾಗವಾಗಿತ್ತು ಅವಳು ನನ್ನ ಎದೆಯಲ್ಲಿ ಜಾಗ ಹಿಡಿದದ್ದು. ಅವರದ್ದು ಬೇರೆ ಬೇರೆ ಧರ್ಮವಾಗಿದ್ದು, ಜೀವನದಲ್ಲಿ ಇನ್ನೆಂದೂ ಒಂದಾಗಲಾರೆವು ಎಂದರಿತೂ ಪರಸ್ಪರ ಉಸಿರಿಗೆ ಸಮವಾದ ಪ್ರೀತಿಯಿತ್ತು. ಪೋಸ್ಟ್ ಡಿಗ್ರಿ ಫೈನಲ್ ಇಯರ್ ಕಲಿಯುವ ವೇಳೆಯಲ್ಲಾಗಿತ್ತು ಲಾಸ್ಟ್ ಟೈಮ್ ನೀಲಕುರಿಂಜಿ ಹೂ ಅರಳಿ ನಿಂತದ್ದು. ಆದರಿಂದಲೇ ಆ ದೃಶ್ಯ ಕಾಣಲು ಕಾಲೇಜ್ ಟೂರ್ ಮೂನಾರಿನತ್ತ ಮುಖಮಾಡಿತ್ತು. ನೆರೆದು ನಿಂತಿರುವ ಮೂನಾರಿನ ನೀಲಕುರಿಂಜಿಯ ಹೂಗಳ ಮಧ್ಯೆ ಅವಳ ಮಡಿಲಲ್ಲಿ ತಲೆಯಿಟ್ಟು ಮಲಗಿದಾಗ ಅವಳು ನನ್ನಲ್ಲಿ ಕೇಳಿದ್ದಳು..’ನಮಗೆ ಒಂದಾಗಿ ಜೀವಿಸಲು ಸಾಧ್ಯವಾಗಬಹುದೇ ರಾಜ್?!’ ಅವತ್ತು ನಾನು ಮೌನಿಯಾಗಿದ್ದೆ. ನನಗೆ ಗೊತ್ತಿತ್ತು ಸಾಧ್ಯವಿಲ್ಲವೆಂಬ ಸತ್ಯ. ಆ ನಿಶ್ಯಬ್ದಕ್ಕೆ ಅವಳ ಮುಖದಲ್ಲಿ ತಳೆದು ನಿಂತ ನೋವು ನನಗರಿವಾಗಿತ್ತು. ‘ನನಗೊಂದು ಮಾತು ಕೊಡ್ತೀಯಾ ರಾಜ್?’ ಆ ಪ್ರಶ್ನೆಗೆ ನಾನವಳ ಮುಖವನ್ನು ಕೌತುಕದಿಂದ ನೋಡಿದೆ.
‘ಕಾಲತುಂಬಾ ಕಳೆಯುತ್ತದೆ.ನಿನಗೊಳ್ಳೆಯ ಕೆಲಸ,ಕುಟುಂಬ ಎಲ್ಲವೂ ಆಗುತ್ತದೆ. ಇನ್ನೊಂದು ಸಲ ಇಲ್ಲಿ ನೀಲಕುರಿಂಜಿ ಹೂ ಅರಳುವಾಗ ಏನೇ ಬ್ಯುಸಿಯಿದ್ದರೂ, ಎಷ್ಟೇ ದೂರದಲ್ಲಿದ್ದರೂ,ಎಂತದೇ ತಡೆಯಿದ್ದರೂ ನೀನಿಲ್ಲಿಗೆ ಬರಬೇಕು ರಾಜ್, ನಾನೂ ಬರುತ್ತೇನೆ. ಬೇರೇನೂ ಅಲ್ಲ, ಒಮ್ಮೆ ಕಾಣಲು ಮಾತ್ರ. ಅವಳ ತಲೆಯ ಮುಟ್ಟಿ ನಾನಂದು ಪ್ರಾಮಿಸ್ ಮಾಡಿದ್ದೆ. ಆ ಮಾತು ಪಾಲಿಸಲು ಬೇಕಾಗಿಯೇ ನೀಲಕುರಿಂಜಿ ಹೂಗಳರಳಿದಾಗ ಅನಿತಾಳೊಂದಿಗೂ ಸುಳ್ಳು ಹೇಳಿ ಅತ್ತ USA ಯಿಂದ ಈ ತಪ್ಪಲಿಗೆ ತಲುಪಿದ್ದ. ತುಂಬಾ ತಡೆಯಿದ್ದರೂ ,ಅದೆಷ್ಟೋ ಕಷ್ಟವಾದರೂ ಮೈಲಿದಾಟಿ ರಾಜ್ ಇಲ್ಲಿಗೆ ಬಂದಿದ್ದ.

ಆಗ ಹಿಂಬಂದಿಯಿಂದ ರಾಜ್.. ರಾಜ್ …ಎಂಬ ಸದ್ದು. ಕರೆ ಕೇಳಿ ಅವನು ನೆನಪಿನಂಗಳಿಂದ ಹೊರಗಿಳಿದ. ಅವನಿಗೆ ತನ್ನ ಕಣ್ಣುಗಳನೊಮ್ಮೆ ನಂಬಲಾಗಲಿಲ್ಲ. ಉರಿಯುವ ರವಿಗಿಂತಲೂ ಅವನನನ್ನು ಕಾಡುವ ಮುಖ ಅದು. ಆನಿ! ‘ಯಾಕೆ ರಾಜ್ ಹಾಗ್ನೋಡ್ತಿದ್ದೀಯಾ, ನಾನ್ಯಾರೆಂದು…?’ ಅವನ ಮುಖ ಕೆಂಪಾಗಿ , ದನಿ ಎಡವತೊಡಗಿತು. 12 ವರ್ಷಗಳ ನಂತರ ಅವನ ಆನಿ ಅವನಮುಂದೆ. ಅವನು ಪರವಶವಾದ ಭಾವದಲ್ಲಿ ಇದ್ದುಬಿಟ್ಟ. ರಾಜ್ ಟೋಟಲಿ ಬದಲಾಗಿದ್ದಾನೆ. ಕೂದಲುದುರಿದೆ,ದೇಹ ಕೂಡಿದೆ,ಕಣ್ಣಿಗೊಂದು ಗ್ಲಾಸೂ ಹಾಕಿದ್ದಾನೆ. ಅವನು ಅವಳತ್ತ ದೃಷ್ಟಿ ನೆಟ್ಟ.ಆನಿಗೆ ಕಿಂಚಿತೂ ಬದಲಾವಣೆಯಿಲ್ಲ ಎನಿಸಿತು. ಅದೇ ಬೆಕ್ಕು ಕಣ್ಣು, ನೀಲಕೇಶ , ಮಾದಕತೆ ತುಂಬಿರೋ ಹಳೇ ನೋಟ. ಅವನ ಹೃದಯ ಒಂದ್ ಸ್ವಲ್ಪ ಸ್ತಬ್ಧವಾಗತೊಡಗಿತು. ‘ರಾಜ್ ಏನ್ಮಾಡ್ತಿದ್ದೀಯ?’ ‘ನಾನು USA ಲಿ ಸಾಫ್ಟ್ವೇರ್ ಇಂಜಿನಿಯರ್’ ಮತ್ತೆ ಮೆಲುದನಿಯಲಿ ಅವಳು ಎಂದಳು. ಅವನ ಮೌನವನ್ನು ಸಹಿಸದೆ ‘ಕುಟುಂಬ..?!’ ಎಂದು ಪ್ರಶ್ನೆ ಹಾಕಿದಳು. ‘ಕಲೀಗ್ ಆಗಿದ್ದ ಒಬ್ಬಳನ್ನೇ ಮದುವೆಯಾದೆ , ಹೆಸರು ಅನಿತಾ… ಒಂದು ಹೆಣ್ಣು ಮಗುವಿದೆ’ ಎಂದು ಹೇಳಿ ಅವನು ತಲೆಗೆಳಗೆ ಹಾಕಿನಿಂತನು. ‘ಆನಿ, ಐಟಿ ಮುಗಿದು ಫಸ್ಟ್ ಇಂಟರ್ವ್ಯೂನಲ್ಲೇ ಕೆಲಸ ಕನ್ಫರ್ಮ್ ಆಯ್ತು. ನಾನು USA ಗೆ ಹೊರಟುನಿಂತಾಗ ನಿನ್ನನ್ನು ತುಂಬಾನೇ ಅನ್ವೇಷಿಸಿದೆ. ಸಣ್ಣ ವಿವರವೂ ಸಿಕ್ಲಿಲ್ಲ. ಯೂಪಿಯಲಿ ಇದ್ದೀಯಾ ಅನ್ನೊವುದೊಂದು ಬಿಟ್ಟು ಬೇರೇನೂ ತಿಳಿಯಲು ಸಾಧ್ಯವಾಗಿಲ್ಲ. ಹೀಗೆ ಹೇಳಿ ತುಸು ಸಮಯ ರಾಜ್ ಏನೂ ಮಾತಾಡದೆ ಸುಮ್ಮನಾದ. ‘ಹೌದು ರಾಜ್, ನಾನು ಪೋಸ್ಟ್ ಡಿಗ್ರಿ ಮುಗಿಯುವುದರೊಂದಿಗೆ ಚಿಕ್ಕಪ್ಪನ ಜೊತೆ ಯೂಪಿಗೆ ಹೋದೆ. ನಿನ್ನನು ಕಾಂಟಾಕ್ಟ್ ಆಗಲು ಒಂದು ದಾರಿಯೂ ಆಗ ನನಗಿರಲಿಲ್ಲ. ಈಗ ನಾನು ಕರ್ಣಾಪುರದಲ್ಲಿ ಅಸಿಸ್ಟೆಂಟ್ ಕಲೆಕ್ಟರ್’

‘ರಾಜ್ ಲಂಚ್ ರೆಡಿ,ಮೊಬೈಲ್ ಕಾಲ್ ಮಾಡಿ ಸಿಗುತ್ತಿಲ್ಲ ಬೇಗ ರೂಮಿಗೆ ಬಾ..’ರೆಸಾರ್ಟ್ ರೂಮಿಂದ ಅನಿತಾ ಕರೆಯುತ್ತಿದ್ದಳು. ‘ಓಹ್ ಅದುವಾ ರಾಜ್ ಹೆಂಡ್ತಿ?!’ ಅದಕ್ಕವನು ‘ಹ್ಮ್’ ಎಂದನು. ‘ಶಿ ಇಸ್ ಲಕ್ಕಿ ಆಂಡ್ ಪ್ರಿಟಿ ಮೋರ್ ದೆನ್ ಮಿ’ ಅಂದಳು. ಅವನಿಗೆ ಆ ಸಮಯ ಮಾತು ಬರಲಿಲ್ಲ. ಬಾಯಿಯಲ್ಲಿ ಧ್ವನಿಯನ್ನು ಕಟ್ಟಿಹಾಕಿದ ಭಾವ. ‘ರಾಜು ಹೋಗು ಇನ್ನು ಹೆಂಡತಿ ಸಂದೇಹ ಪಡುವುದು ಬೇಡ. ನನಗಿನ್ನೇನೂ ಬೇಡ .ಒಂದ್ಸಲ ಕಾಣಬೇಕೆಂದಿತ್ತು, ಕಂಡೆ. ಅದು ಸಾಕು ನನಗೆ..’ ಅವಳ ಕಣ್ಣೊದ್ದೆಯಾಯಿತು. ತುಟಿ ಕಂಪಿಸಿತು. ಕಣ್ಣು ಕೆಂಪಾಯಿತು. ಮಾತು ಮುಂದುವರಿಸಿದಳು. ’12 ವರ್ಷಗಳ ನಂತರ ನನಗೆ ಕೊಟ್ಟ ಮಾತು ಪಾಲಿಸಲು ಇಲ್ಲಿವರೆಗೆ ಕಡಲು ದಾಟಿ ರಾಜ್ ಬಂದೀಯಲ್ವಾ.. ಆ ಸ್ನೇಹ ಮಾತ್ರ ಸಾಕೆನಗೆ. ಕಾಲವಿಷ್ಟು ಕಳೆದರೂ ಸಹ ನನ್ನ ಕಾಣಲು ನಿನಗೆ ತೋಚಿತಲ್ಲವೇ? ಆ ನೆನಪೇ ಧಾರಾಳ. ಅದು ಸಾಕು… ಅದು ಮಾತ್ರ ಸಾಕು..’ ಮಾತು ಮಗಿಸುವಾಗ ಅಳುತ್ತಾ ಮಗುವಾದಳು. ‘ಆನಿ..ಪ್ಲೀಸ್ ಜನರು ನೋಡುತ್ತಿದ್ದಾರೆ..ಅಳಬೇಡ ಪ್ಲೀಸ್’ ಎಂದನು. ಅವಳು ಸಾವರಿಸಿ ಕೆನ್ನೆಗಿಳಿದ ಕಣ್ಣೀರು ಒರೆಸಿದಳು. ‘ಷಾಜಹಾನಿನ ಪ್ರೀತಿಯ ಸ್ಮಾರಕ ತಾಜ್ ಮಹಲಾಗಿದ್ದರೆ ಬಾಡಿಹೋದ ನಮ್ಮ ಪ್ರೀತಿಯ ಸ್ಮಾರಕ ಅರಳಿನಿಂತ ನೀಲಕುರಿಂಜಿ ಹೂಗಳು. ಮತ್ತೊಂದು ಸಲ ಹೂ ಅರಳುವಾಗ ಆಯಸ್ಸಿದ್ದರೆ ಮತ್ತೆ ಸಿಗುವ..’ ಎಂದು ಅವನಿಗೆ ಬೆನ್ನುಮಾಡಿ ನಡೆಯತೊಡಗಿದಳು. ‘ಆನಿಯ ಗಂಡನ ಕುರಿತೇನೂ ಹೇಳಲಿಲ್ಲ…’ ರಾಜ್ ನ ಪ್ರಶ್ನೆಗೆ ಅವಳು ತಲೆ ತಿರುಗಿಸಿದಳು. ಮತ್ತೆ ನಿಷೇದಾರ್ಥದಲಿ ತಲೆಯಾಡಿಸಿ ತುಟಿಯನು ಅಗಲಿಸಿ ಕೆಳಹಾಕಿದಳು. ‘ಗಂಡನ ಅವಶ್ಯಕತೆ ಉಂಟೆಂದು ತೋಚಲಿಲ್ಲ. ರಾಜ್ ನ ಜೊತೆಗಿದ್ದ ಸಿಹಿನೆನಪುಗಳೇ ನನಗೆ ಧಾರಾಳವಾಗಿತ್ತು ,ಆದ್ದರಿಂದಲೇ ವಿವಾಹವಾಗಲಿಲ್ಲ’ ಎಂದಳು. ಅವಳ ಆ ಮಾತಿಗೆ ಮತ್ತೊಮ್ಮೆ ಅವನು ಕಂಪನಗೊಂಡನು. ಏನಾದರೂ ಹೇಳುವ ಮುನ್ನವೇ ಅವಳು ತಪ್ಪಲನಿಳಿಯಲು ಶುರುಮಾಡಿದಳು. ಅರಳಿ ನಿಂತ ನೀಲಕುರಿಂಜಿ ಗಳ ಮಧ್ಯೆ ಅವಳು ಮರೆಯಾಗುವುದು ನೋಡಿ ನಿಲ್ಲಲು ಮಾತ್ರ ಅವನಿಗೆ ಸಾಧ್ಯವಾಯುತು. ಆ ವರ್ಷದ ಮೂನಾರಿನ ನೀಲಕುರಿಂಜಿ ಹೂಗಳು ಅವರಿಬ್ಬರ ವಿರಹಕ್ಕೆ ಸಾಕ್ಷಿಯಾಯಿತು.

By dtv

Leave a Reply

Your email address will not be published. Required fields are marked *

error: Content is protected !!