ಬಿಹಾರ: ದೇವಸ್ಥಾನ ಆವರಣದಲ್ಲಿಯೇ ಮುಖ್ಯ ಅರ್ಚಕನನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆ ಮಾಡಿದ ಘಟನೆ ಬಿಹಾರದ ಧರ್ಬಾಂಗ ಜಿಲ್ಲೆಯ ಯೂನಿವರ್ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ ಮೊಹಲ್ಲಾದಲ್ಲಿ ಇರುವ ಕಂಕಾಲಿಲ್ಲಿ ನಡೆದಿದೆ.
ಇಂದು ಮುಂಜಾನೆ ದೇಗುಲದ ಆವರಣದಲ್ಲಿಯೇ ದುರ್ಘಟನೆ ನಡೆದಿದ್ದು, ದುಷ್ಕರ್ಮಿಗಳು ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಇನ್ನು ಮುಖ್ಯ ಅರ್ಚಕರ ಹತ್ಯೆ ಮಾಡುತ್ತಿದ್ದಂತೆ ಅಲ್ಲಿಯೇ ಸುತ್ತಮುತ್ತಲೂ ಇದ್ದ ಜನರು, ದೇಗುಲಕ್ಕೆ ಆಗಮಿಸಿದ್ದ ಭಕ್ತರು ಸೇರಿ, ಆಕ್ರಮಣ ಮಾಡಿದವರಲ್ಲಿ ಒಬ್ಬನನ್ನು ಹಿಡಿದು, ಥಳಿಸಿಯೇ ಕೊಂದಿದ್ದಾರೆ.
ಅಷ್ಟೇ ಅಲ್ಲ, ಕಾರನ್ನೂ ಹಾಳುಮಾಡಿದ್ದಾರೆ. ಹತ್ಯೆಯಾಗಿರುವ ಕಂಕಾಲಿ ದೇಗುಲದ ಮುಖ್ಯ ಅರ್ಚಕರು ಸ್ವಲ್ಪ ದಿನಗಳ ಹಿಂದೆ ಕೆಲವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಲವು ಗೂಂಡಾಗಳು ಕಂಠಪೂರ್ತಿ ಕುಡಿದು ತೊಂದರೆಕೊಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಪೊಲೀಸರು ಆಗ ಯಾವುದೇ ಕ್ರಮವನ್ನೂ ತೆಗೆದುಕೊಂಡಿರಲಿಲ್ಲ. ಅದಾದ ನಂತರ ಒಂದುದಿನ ಈ ಅರ್ಚಕರು ತಮ್ಮ ರಾಮ್ಬಾಘ್ನಲ್ಲಿರುವ ಮನೆಯಲ್ಲಿ ರಾತ್ರಿ ಮಲಗಿದ್ದಾಗ ಇದೇ ದುಷ್ಕರ್ಮಿಗಳು ದಾಳಿ ನಡೆಸಿದ್ದರು ಎಂದೂ ಹೇಳಲಾಗಿದೆ.
ಆದರೆ ಈಗ ದೇಗುಲದ ಆವರಣದಲ್ಲಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಗಲಾಟೆಯಲ್ಲಿ ಭಕ್ತರೊಬ್ಬರಿಗೂ ಗಾಯವಾಗಿದ್ದು, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ.ಪೊಲೀಸರು ಹೇಳಿದ್ದೇನು?ಈ ಜಗಳ ಶುರುವಾಗಿದ್ದು ಅರ್ಚಕನ ಮಗನಿಂದ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಒಟ್ಟು ನಾಲ್ವರು ಗೂಂಡಾಗಳು ಅರ್ಚಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಅದರಲ್ಲೊಬ್ಬ ಆರೋಪಿ ಮತ್ತು ಅರ್ಚಕನ ಮಗನ ಮಧ್ಯೆ ಮೊಬೈಲ್ ವಿಚಾರಕ್ಕೆ ಜಗಳ ಆಗಿತ್ತು ಎಂಬುದು ಗೊತ್ತಾಗಿದೆ. ಮಧ್ಯಪ್ರವೇಶಿಸಿದ್ದ ಅರ್ಚಕರ ಮೇಲೆಯೂ ಅವರ ದ್ವೇಷ ತಿರುಗಿತ್ತು. ದಾಳಿ ನಡೆಸಿದ ನಾಲ್ವರಲ್ಲಿ ಮೂವರನ್ನು ಸ್ಥಳೀಯರು, ಭಕ್ತರು ಸೇರಿ ಥಳಿಸಿದ್ದಾರೆ. ಒಬ್ಬನನ್ನು ಹತ್ಯೆಗೈದಿದ್ದಾರೆ. ತಪ್ಪಿಸಿಕೊಂಡಿರುವ ಒಬ್ಬನನ್ನು ಆದಷ್ಟು ಶೀಘ್ರವೇ ಬಂಧಿಸುತ್ತೇವೆ. ಸಿಸಿಟಿವಿ ಫೂಟೇಜ್ಗಳ ಪರಿಶೀಲನೆಯೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.