ಹೈದರಾಬಾದ್: 85 ವರ್ಷದ ಎಸ್. ಪೆರುಮಾತಾಳ್ ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಶಿವಂತಿಪಟ್ಟಿ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಪ್ರತಿನಿತ್ಯ ಜನರೊಂದಿಗೆ ಮಾತನಾಡುವುದರಿಂದ, ಪಂಚಾಯತ್‍ನಲ್ಲಿ ಪ್ರಚಾರ ಮಾಡುವುದು, ಮನೆಗಳಿಗೆ ಭೇಟಿ ನೀಡುವುದು ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಪಂಚಾಯತ್‍ಗೆ ಕುಡಿಯುವ ನೀರಿನ ಪೂರೈಕೆ ನಿರಂತರವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ನನ್ನ ಬಾಲ್ಯದಿಂದಲೂ ಕುಡಿಯುವ ನೀರು ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಆ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುತ್ತೇನೆ.
ನಾವು ಮಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ನಮ್ಮಲ್ಲಿ ಕುಡಿಯುವ ನೀರಿಗೆ ಬೇರೆ ಯಾವುದೇ ಮೂಲವಿಲ್ಲ. ಬೀದಿ ದೀಪಗಳನ್ನು ಅಳವಡಿಸಲು ಮತ್ತು ಪಂಚಾಯತ್‍ನಲ್ಲಿ ರಸ್ತೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದು ಪೆರುಮಾತಾಳ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 85 ವರ್ಷದ ಎಸ್. ಪೆರುಮಾತಾಳ್ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.
ಈ ವೇಳೆ ಪೆರುಮಾತಾಳ್ ಬಹುಮತವನ್ನು ಪಡೆದು ಆಯ್ಕೆಯಾಗುವ ಮೂಲಕವಾಗಿ ಅತ್ಯಂತ ಹಿರಿಯ ಪಂಚಾಯತ್ ಸದಸ್ಯೆ ಮತ್ತು ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೀರ್ಘಕಾಲದಿಂದಲೂ ರಾಜಕೀಯದಲ್ಲಿ ಪೆರುಮಾತಾಳ್ ತೊಡಗಿಸಿಕೊಂಡಿದ್ದರು. ಆದರೆ ಇದೆ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದು ಅಧಿಕಾರ ಚುಕ್ಕಾಣಿಯನ್ನು ಹಿಡಿದಿದ್ದಾರೆ. ರಾಜಕೀಯದಲ್ಲಿ ತೊಡಗಿಕೊಂಡಿದ್ದ ಪೆರುಮಾತಾಳ್ ತಮ್ಮ ಮಗನಿಗಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಈ ಭಾರಿ ತಾವೇ ಸ್ಪರ್ಧೆ ಮಾಡಿ 1,568 ಮತಗಳನ್ನು ಪಡೆದುಕೊಂಡು ಪಂಚಾಯತ್ ಅಧ್ಯಕ್ಷರಾಗಿದ್ದಾರೆ.