ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಕರಾವಳಿ ಮತ್ತೊಮ್ಮೆ ಸುದ್ದಿಯಾಗುತ್ತಿದೆ.
ಧರ್ಮ, ಧರ್ಮಗಳ ಮದ್ಯೆ ಕೋಮು ದ್ವೇಷವೂ ಮತ್ತೆ ಕೆನ್ನಾಲಿಯ ಹೊರ ಸೂಸುತ್ತಿದೆ.
ಈ ಕೆಂಡವು ನಮ್ಮ ಮನೆಯ ಸುಡುವ ಮುನ್ನ ಎಚ್ಚೆತ್ತುಕೊಳ್ಳೋಣ.
ರಾಜಕೀಯ ಲಾಭಕ್ಕಾಗಿ ನಡೆಸುವ ಪ್ರೋಚೋದನಾ ಭಾಷಣಗಳು ಅತಿರೇಕಗಳು ಬಡವರ ಮನೆಯ ಒಲೆಯನ್ನು ಆರಿಸುತ್ತಿದೆ.
ಮನೆಗೆ ಆಧಾರ ಸ್ತಂಭವಾಗ ಬೇಕಾಗಿದ್ದ ಮನೆಯ ಹಿರಿಯ ಮಗ ನಾಯಕರ ಬಣ್ಣದ ಪ್ರೋಚೋದನಾ ಭಾಷಣಗಳಿಗೆ ಮರುಳಾಗಿ ಇದೀಗ ಜೈಲಿನಲ್ಲೋ ಅಥವಾ ಬೀದಿಗಳಲ್ಲೋ ಹೆಣವಾಗಿ ಬಿದ್ದಿದ್ದಾನೆ.
ಭಾಷಣ ಮಾಡಿದಾತ ಆತನ ಮನೆಗೆ ತೆರಳಿ ಒಂದಷ್ಟು ಸಂತಾಪ ಸೂಚಿಸಿ ಫೋಟೋ ತೆಗೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಹೋಗಿದ್ದಾನೆ.
ಕೆಲವೊಂದು ಮಂದಿಗಳು Rip ಹಾಕಿದ್ದಾರೆ ಕಥೆ ಮುಗಿಯಿತು ಅಲ್ಲಿಗೆ.
ಆದರೆ ಇಂತಹ ಘಟನೆಗಳಿಂದ ನಷ್ಟವಾಗಿರುವುದು ತಾಯಿಗೆ ಮಗ, ಪತ್ನಿಗೆ ಗಂಡ, ಮಗುವಿಗೆ ತಂದೆ ಮಾತ್ರವಲ್ಲ ಇಂತಹ ಅದೆಷ್ಟೋ ಕುಟುಂಬಗಳ ಕನಸುಗಳು, ಚಿಕ್ಕ ಪುಟ್ಟ ಮಕ್ಕಳು ತಬ್ಬಲಿಯಾಗುತ್ತಿದೆ.
ಅಪ್ಪಾ…ಅಂತ ಕರೆಯಲು ತಂದೆ ಕೋಮು ಸಂಘರ್ಷದಲ್ಲಿ ಬಲಿಯಾಗಿದ್ದಾನೆ.
ಹೌದು ಇಂತಹ ಘಟನೆಗಳಾಗಿವೆ ಮೊನ್ನೆಯಿಂದ ಕರಾವಳಿಯಲ್ಲಿ ಮರುಕಳಿಸುತ್ತಿರುವುದು.
ಪರಸ್ಪರ ಅನೋನ್ಯತೆಯಿಂದ ಪ್ರೀತಿ, ವಾತ್ಸಲ್ಯದಿಂದ, ಸೌಹಾರ್ದತೆಯಿಂದ ಬದುಕಬೇಕಾದ ಈ ಸುಂದರ ನಾಡು ಇದೀಗ ಮತ್ತಷ್ಟು ಕೋಮು ಗಲಭೆಗಳಿಂದ ಕಲುಷಿತಗೊಳ್ಳುತ್ತಿದೆ.
ರಾಜಕೀಯ ಲಾಭಕ್ಕಾಗಿ ಧರ್ಮಗಳ ನಡುವಿನಲ್ಲಿ ಕಂದಕ ಸೃಷ್ಟಿಸಿ ಮೈಕ್ ಹಿಡಿದು ಮತ್ತೊಂದು ಧರ್ಮದ ಸಹೋದರನ ಬಲಿ ಪಡೆಯಲು ಪ್ರೋಚೋದಿಸುವ ಈ ದ್ವೇಷ ಕೊನೆಗೊಳ್ಳುವುದು ಎಂದು?.
ಭಾಷಣ ಬಿಗಿದವರು ಬೆಚ್ಚೆಗೆ ಮನೆ ಸೇರಿದ್ದಾರೆ. ಒಂದಷ್ಟು ಬಡವರ ಮನೆಯ ಯುವಕರು ಬೀದಿಗಳಲ್ಲಿ ಹೆಣವಾಗಿ ಬೀಳುತ್ತಿದ್ದಾರೆ. ಎಚ್ಚೆತ್ತುಕೊಳ್ಳಬೇಕಿದೆ ಇನ್ನು ಕೋಮು ದ್ವೇಷದ ಜ್ವಾಲೆ ನಮ್ಮ ಮನೆಯ ಸುಡುವ ಮುನ್ನ.
ನಮ್ಮ ಮನೆಯವರು ಅನಾಥರಾಗುವ ಮುನ್ನ.