ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 222 ರನ್ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿರುವ ಭಾರತ ತಂಡ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 12 ರಿಂದ ಪಿಂಕ್ ಬಾಲ್ ಟೆಸ್ಟ್ ಪ್ರಾರಂಭವಾಗಲಿದೆ.
ಇದು ಭಾರತದಲ್ಲಿ ನಡೆಯುತ್ತಿರುವ ಎರಡನೇ ಡೇ-ನೈಟ್ ಟೆಸ್ಟ್ ಪಂದ್ಯವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಂದ್ಯ ವೀಕ್ಷಿಸಲು ಶೇ. 100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ್ದು, ಹೀಗಾಗಿ ತುಂಬಿದ ಕ್ರೀಡಾಂಗಣದಲ್ಲಿ ಇಂಡೋ-ಲಂಕಾ ಕದನ ನಡೆಯಲಿದೆ. ಹೀಗಾಗಿ ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸ್ಟೇಡಿಯಂ ಸುತ್ತಮುತ್ತ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಯಾವ್ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ?
ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಹಾಗೂ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಿದ್ದವಾಗಿದೆ. ಈ ಪಂದ್ಯ ಡೇ- ನೈಟ್ ಟೆಸ್ಟ್ ಪಂದ್ಯವಾಗಿದೆ. ಅಲ್ಲದೆ ಪಂದ್ಯ ಮುಗಿದ ನಂತರ ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವುದಂತ್ತೂ ಖಚಿತ. ಹೀಗಾಗಿ ಮುಂಜಾಗೃತ ಕ್ರಮವಾಗಿ ಕೆ.ಎಸ್.ಸಿ.ಎ. ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.
ಅದರಲ್ಲೂ ಕ್ವಿನ್ಸ್ ರಸ್ತೆಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೂ ಹಾಗೂ ಎಂ.ಜಿ ರಸ್ತೆಯಲ್ಲಿ ಕ್ಲೀನ್ಸ್ ವೃತ್ತದಿಂದ ಕಾವೇರಿ ಎಂಪೋರಿಯಂ ಜಂಕ್ಷನ್ವರೆಗೂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ ಯಾವುದೇ ವಾಹನಗಳ ಓಡಾಟಕ್ಕೆ ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ಪಂದ್ಯ ನಡೆಯುವ 5 ದಿನಗಳವರೆಗೂ ವಾಹನ ಸಂಚಾರರು ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಡೆಸದಿರುವುದೇ ಸೂಕ್ತವಾಗಿದೆ.
ಬೆಂಗಳೂರಿನಲ್ಲಿ ನಡೆಯುವ ಟೆಸ್ಟ್ಗೆ ಟಿಕೆಟ್ ದರ:
ಭಾರತ-ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಶೇಕಡಾ ನೂರಕ್ಕೆ ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಕೆಎಸ್ಸಿಎ ಆಡಳಿತ ಮಂಡಳಿ ನಿರ್ಧರಿಸಿದೆ. ಕೆಎಸ್ಸಿಎ ಈ ಸುದ್ದಿಯನ್ನು ತಿಳಿಸಲು ತುಂಬಾ ಸಂತೋಷದಾಯಕವಾಗಿದೆ. ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗೆ ಉತ್ತಮ ಪ್ರೇಕ್ಷಕರ ಬೆಂಬಲ ಸಿಕ್ಕಿದ್ದು, ವೀಕ್ಷಣೆಯ ದೃಷ್ಟಿಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದ ಪರಿಣಾಮ, ಬೆಂಗಳೂರಿನಲ್ಲಿ ಮಾರ್ಚ್ 12-16ರವರೆಗೆ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಮುಂದಿನ ಯಾವುದೇ ನಿರ್ದಿಷ್ಟ ಆದೇಶ ಬರುವತನಕ ಕೆಎಸ್ಸಿಎ ಪೂರ್ಣ ಪ್ರಮಾಣದಲ್ಲಿ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಿದೆ,” ಎಂದು ಹೇಳಿದೆ.
ಟಿಕೆಟ್ ದರ:
ಗ್ರ್ಯಾಂಡ್ ಟೆರೆಸ್: 1,250 ರೂಪಾಯಿ (ಗೇಟ್ ನಂ. 18)
ಇ ಎಕ್ಸಿಕ್ಯೂಟಿವ್, ಎನ್ ಸ್ಟ್ಯಾಂಡ್: 750 ರೂಪಾಯಿ (ಗೇಟ್ ನಂ. 18)
ಡಿ ಕಾರ್ಪೊರೇಟ್, ಎ ಸ್ಟ್ಯಾಂಡ್, ಬಿ ಲೋವರ್ ಮತ್ತು ಬಿ ಅಪ್ಪರ್: 500 ರೂಪಾಯಿ (ಗೇಟ್ ನಂ. 19)
ಜಿ ಅಪ್ಪರ್/ ಜಿ ಲೋವರ್ 1 ಮತ್ತು ಜಿ ಲೋವರ್ 2: 100 ರೂಪಾಯಿ (ಗೇಟ್ ನಂ. 2)
ಬುಧವಾರ ಖಾಸಗಿ ವಿಮಾನದ ಮೂಲಕ ಎರಡೂ ತಂಡಗಳ ಆಟಗಾರರು ಮತ್ತು ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಒಂದು ದಿನ ಹೋಟೆಲ್ನಲ್ಲಿ ವಿಶ್ರಾಂತಿ ಪಡೆದಿದ್ದ ಆಟಗಾರರು ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ, ಕಟ್ಟುನಿಟ್ಟಾದ ಕೋವಿಡ್ ಬಯೋಬಬಲ್ ನಿಯಮ ಜಾರಿ ಮಾಡಲಾಗಿದೆ ಎಂದು ಕೆಎಸ್ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ) ತಿಳಿಸಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಬಳಗ ಇನ್ನಿಂಗ್ಸ್ ಹಾಗೂ 222 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಜಯ ಸಾಧಿಸಿತು. ಪಂದ್ಯ ಮೂರೇ ದಿನದಲ್ಲಿ ಅಂತ್ಯವಾಗಿದ್ದರಿಂದ ಎರಡು ದಿನ ಮೊಹಾಲಿಯಲ್ಲಿಯೇ ಉಳಿದ ಉಭಯ ತಂಡಗಳು, ಅಲ್ಲಿಯೇ ಪಿಂಕ್ ಬಾಲ್ ಬಳಸಿ ಅಭ್ಯಾಸ ಶುರು ಮಾಡಿದ್ದವು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿ ಸರಣಿಯನ್ನು ವಶಕ್ಕೆ ಪಡೆಯಲು ಎದುರು ನೋಡುತ್ತಿದೆ. ಈಗಾಗಲೇ ಸತತ ಗೆಲುವಿನ ಮೂಲಕ ರೋಹಿತ್ ನಾಯಕತ್ವದಲ್ಲಿ ದಾಖಲೆ ಬರೆದಿರುವ ಭಾರತ ಇತಿಹಾಸ ನಿರ್ಮಿಸುತ್ತಾ ಎಂಬುದು ನೋಡಬೇಕಿದೆ.