ನ್ಯೂಜಿಂಡ್ನ ಬೇ ಓವಲ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (ICC Women’s World Cup 2022) ನಾಲ್ಕನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡ ಗೆದ್ದು ಬೀಗಿದೆ. ಸ್ಮೃತಿ ಮಂದಾನ, ಸ್ನೇಹ ರಾಣ ಮತ್ತು ಪೂಜಾ ವಸ್ತ್ರಕರ್ ಅವರ ಆಕರ್ಷಕ ಅರ್ಧಶತಕದ ಜೊತೆ ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಭಾರತೀಯ ವನಿತೆಯರು 107 ರನ್ಗಳ ಅಮೋಘ ಗೆಲುವು ಸಾಧಿಸಿದರು. ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್ನ ಮೊದಲ ಪಂದ್ಯವನ್ನೇ ಮಿಥಾಲಿ ಪಡೆ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಭಾರತ ನೀಡಿದ್ದ 245 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ನಿಧಾನಗತಿಯ ಆರಂಭ ಪಡೆದುಕೊಂಡಿತು. ಮೊದಲ 11 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 28 ರನ್, ಜೊತೆಗೆ 11ನೇ ಓವರ್ನಲ್ಲಿ ಜವೇರಿಯಾ ಖಾನ್ (11) ವಿಕೆಟ್ ಕಳೆದುಕೊಂಡಿತು.
ನಾಯಕಿ ಬಿಸ್ಮಾ ಮರೂಫ್ ಆಟ ಕೇವಲ 15 ರನ್ಗೆ ಅಂತ್ಯವಾದರೆ, 30 ರನ್ ಗಳಿಸಿದ್ದ ಸಿದ್ರಾ ಅಮೀನ್ರನ್ನು ಪೆವಿಯನ್ಗೆ ಅಟ್ಟುವಲ್ಲಿ ಜೂಲನ್ ಗೋಸ್ವಾಮಿ ಯಶಸ್ವಿಯಾದರು. ನಂತರ ಬಂದ ಬ್ಯಾಟರ್ಗಳು ಯಾರೂ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಭಾರತೀಯ ಬೌಲಿಂಗ್ ಪಡೆಯನ್ನು ಎದುರಿಸಲಾಗದೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಪಾಕಿಸ್ತಾನ 42.5 ಓವರ್ನಲ್ಲಿ 137 ರನ್ಗೆ ಆಲೌಟ್ ಆಯಿತು. ಭಾರತ ಪರ ರಾಜೇಶ್ವರಿ ಗಾಯಕ್ವಾಡ್ 4 ವಿಕೆಟ್ ಕಿತ್ತು ಮಿಂಚಿದರೆ, ಸ್ನೇಹ್ ರಾಣ ಹಾಗೂ ಗೋಸ್ವಾಮಿ ತಲಾ 2, ದೀಪ್ತಿ ಶರ್ಮಾ ಮತ್ತು ಮೇಗ್ನಾ ಸಿಂಗ್ ತಲಾ 1 ವಿಕೆಟ್ ಪಡೆದರು.
107 ರನ್ಗಳ ಗೆಲುವಿನೊಂದಿಗೆ ಭಾರತ ಮಹಿಳಾ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಈ ಭರ್ಜರಿ ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನ್ ತಂಡದ ಡ್ರೆಸಿಂಗ್ ರೂಮ್ಗೆ ತೆರಳಿದ್ದರು. ಅಲ್ಲದೆ ಅಲ್ಲಿದ್ದ ವಿಶೇಷ ಅತಿಥಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಇದೀಗ ಇಡೀ ವಿಶ್ವದ ಹೃದಯ ಗೆದ್ದಿದ್ದಾರೆ.
ಹೌದು, ಟೀಮ್ ಇಂಡಿಯಾ ಆಟಗಾರ್ತಿಯರು ಗೆದ್ದ ಖುಷಿಯ ನಡುವೆ ಪಾಕಿಸ್ತಾನ್ ತಂಡ ನಾಯಕಿ ಬಿಸ್ಮಾ ಮರೂಫ್ ಅವರ ಮಗುವನ್ನು ನೋಡಲು ಹೋಗಿದ್ದರು. ಬಿಸ್ಮಾ ಮರೂಫ್ ಈ ಬಾರಿ ವಿಶ್ವಕಪ್ಗಾಗಿ 6 ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಪುಟ್ಟ ಕಂದಮ್ಮನನ್ನು ಹೊಂದಿದ್ದರೂ ಬಿಸ್ಮಾ ದೇಶದ ಪರ ಆಡುವುದರಿಂದ ಹಿಂದೇಟು ಹಾಕಿರಲಿಲ್ಲ. ಅಲ್ಲದೆ ಮಗುವಿನೊಂದಿಗೆ ವಿಶ್ವಕಪ್ನಲ್ಲಿ ಭಾಗವಹಿಸಲು ಪಾಕ್ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆದಿದ್ದರು.
ಅದರಂತೆ ಪುಟ್ಟ ಪುಟಾಣಿಯೊಂದಿಗೆ ಆಗಮಿಸಿದ್ದ ಬಿಸ್ಮಾ ಮರೂಫ್ಗೆ ಟೀಮ್ ಇಂಡಿಯಾ ಆಟಗಾರ್ತಿಯರು ಸರ್ಪ್ರೈಸ್ ನೀಡಿದ್ದಾರೆ. ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಆಟಗಾರ್ತಿಯರು ತಮ್ಮ ಖುಷಿಯ ನಡುವೆ ಪುಟಾಣಿ ಬಿಸ್ಮಾ ಅವರ ಆರು ತಿಂಗಳ ಹೆಣ್ಣು ಮಗು ಫಾತಿಮಾಳೊಂದಿಗೆ ಫೋಟೋ ಕ್ಲಿಕ್ಕಿಸಿದ್ದಾರೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಆಟಗಾರ್ತಿಯರು ಕೆಲ ಹೊತ್ತು ಮಗುವಿನೊಂದಿಗೆ ಆಟವಾಡಿದ್ದಾರೆ. ಇದೀಗ ಈ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಟೀಮ್ ಇಂಡಿಯಾ ಆಟಗಾರ್ತಿಯರ ಈ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.