2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತಡರಾತ್ರಿ ಆರು ಮತ್ತು ಕೊನೆಯ ಪಟ್ಟಿ ರಿಲೀಸ್ ಮಾಡಿದೆ. ಬುಧವಾರ ರಾತ್ರಿ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ 5 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಹಿನ್ನೆಲೆ ರಾತ್ರಿಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದೆ.
ಮಂಗಳವಾರ 4ನೇ ಪಟ್ಟಿಯಲ್ಲಿ 7 ಮಂದಿಗೆ ಟಿಕೆಟ್ ಘೋಷಣೆ ಮಾಡಿ 8 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಶಿಗ್ಗಾಂವಿಯಲ್ಲಿ ಬಂಡಾಯ ಉಂಟಾದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯನ್ನ ಬುಧವಾರ ರಾತ್ರಿ ಬದಲಾವಣೆ ಮಾಡಿತ್ತು.
ಕಾಂಗ್ರೆಸ್ ರಾಯಚೂರು ನಗರ ವಿಧಾಸಭಾ ಕ್ಷೇತ್ರಕ್ಕೆ ಮೊಹಮ್ಮದ್ ಶಲಾಂ, ಶಿಡ್ಲಘಟ್ಟ ವಿಧಾಸಭಾ ಕ್ಷೇತ್ರಕ್ಕೆ ಬಿ ವಿ ರಾಜೀವ್ ಗೌಡ, ರಾಜಧಾನಿ ಬೆಂಗಳೂರಿನ ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರಕ್ಕೆ (ಪರಿಶಿಷ್ಟ ಜಾತಿ ಮೀಸಲು ) ಎಸ್. ಆನಂದ್ ಕುಮಾರ್, ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಎಚ್.ಪಿ ಶ್ರೀಧರ್ ಗೌಡ, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್ ಅಲಿಯವರಿಗೆ ಟಿಕೆಟ್ ನೀಡಿದೆ.
ರಾಯಚೂರಿನ ಕಾಂಗ್ರೆಸ್ ಟಿಕೆಟ್ ಮಾಜಿ ಎಂಎಲ್ ಸಿ ಎನ್.ಎಸ್. ಬೋಸರಾಜು ಎನ್ನುವ ಚರ್ಚೆ ಜೋರಿತ್ತು. ಆದರೆ, ಅಲ್ಪಸಂಖ್ಯಾತರು ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಕೂಗು ಹೆಚ್ಚಿತ್ತು. ಅದರಂತೆಯೇ ಮೊಹಮದ್ ಶಲಾಂ ಅವರಿಗೆ ಟಿಕೆಟ್ ನೀಡಲಾಗಿದೆ.
ಮಂಗಳೂರು ಉತ್ತರ ಟಿಕೆಟ್ ಇನಾಯತ್ ಅಲಿ ಯಶಸ್ಸು:
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಮೊಯ್ದಿನ್ ಬಾವಾ ಮತ್ತು ಇನಾಯತ್ ಅಲಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ಮೊಯ್ದಿನ್‌ಬಾವಾ ಅವರು ಕಳೆದ (2018) ಚುನಾವಣೆಯಲ್ಲಿ ಬಿಜೆಪಿಯ ಭರತ್ ಶೆಟ್ಟಿ ಅವರ ವಿರುದ್ಧ ಸೋತಿದ್ದರು.
ಸಿದ್ದರಾಮಯ್ಯ ಗುಂಪಿನಲ್ಲಿ ಬಾವಾ ಗುರುತಿಸಿಕೊಂಡಿದ್ದು, ಇನಾಯತ್ ಅಲಿ ಅವರು ಡಿ.ಕೆ. ಶಿವಕುಮಾರ್ ಬಣದಲ್ಲಿದ್ದರು. ಸದ್ಯ ಇನಾಯತ್ ಅಲಿ ಅವರಿಗೆ ಟಿಕೆಟ್ ಸಿಕ್ಕಿದೆ.
ಅರಕಲಗೂಡ ಟಿಕೆಟ್ ನಿವೃತ್ತ ಪೊಲೀಸ್ ಅಧಿಕಾರಿಗೆ:
ಅರಕಲಗೂಡಿನಲ್ಲಿ ಎಂ.ಟಿ.ಕೃಷ್ಣೇಗೌಡ ಮತ್ತು ಶ್ರೀಧರ ಗೌಡ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಎಂ.ಟಿ.ಕೃಷ್ಣೇಗೌಡ ಅವರು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಮೂಲಕ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದು, ಟಿಕೆಟ್ ಖಚಿತ ಎಂದು ನಂಬಿಕೊಂಡು ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದರು. ಇತ್ತ ಶ್ರೀಧರಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭರವಸೆ ನಂಬಿ ಚುನಾವಣೆಗೆ ಸಿದ್ಧತೆ ಮಾಡಿ ಕೊಳ್ಳುತ್ತಿದ್ದರು. ಸದ್ಯ ಶ್ರೀಧರಗೌಡ ಅವರಿಗೆ ಟಿಕೆಟ್ ಕೊಡಲಾಗಿದೆ. ಇವರು ಪೊಲೀಸ್ ಅಧಿಕಾರಿಯಾಗಿದ್ದವರು. ಹತ್ತು ವರ್ಷಗಳಿಗೂ ಹೆಚ್ಚು ಸೇವಾವಧಿ ಇದ್ದರೂ ವಿಧಾನಸಭಾ ಚುನಾವಣೆಗೆ ಸ್ಪರ್ಧೆಗಾಗಿಯೇ ನಿವೃತ್ತಿ ಪಡೆದಿದ್ದಾರೆ.
ಎಲ್ಲಾ ಪಕ್ಷಗಳ ಟಿಕೆಟ್ ಘೋಷಣೆ; ನಾಮಪತ್ರ ಸಲ್ಲಿಕೆಗೆ ಕೊನೆ ದಿನ:
ಬುಧವಾರ ಬಿಜೆಪಿ ಇಬ್ಬರು, ಜೆಡಿಎಸ್ 59 ಹಾಗೂ ಕಾಂಗ್ರೆಸ್ ಮೊದಲು ಮೂರು, ಆನಂತರ ಐದು ಒಟ್ಟು ಎಂಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿ ಎಲ್ಲಾ ಪಕ್ಷಗಳ ಟಿಕೆಟ್ ಹಂಚಿಕೆ ಪೂರ್ಣಗೊಂಡಿವೆ. ಏ.20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಬುಧವಾರ ಟಿಕೆಟ್ ಘೋಷಣೆಯಾಗಿರುವ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ