ಕೋಝಿಕ್ಕೋಡ್: ಮಲಯಾಳಂ ಸಿನಿಮಾ ರಂಗದ ದಿಗ್ಗಜ ನಟ ಮಾಮುಕೋಯ (76) ಬುಧವಾರ ಮಧ್ಯಾಹ್ನ ( ಎ.26 ರಂದು) ನಿಧನರಾಗಿದ್ದಾರೆ.
ಇತ್ತೀಚೆಗೆ ಮಲಪ್ಪುರಂಗೆ ಫುಟ್ ಬಾಲ್ ಪಂದ್ಯಾಕೂಟವೊಂದನ್ನು ಉದ್ಘಾಟನೆ ಮಾಡಲು ಬಂದಿದ್ದ ವೇಳೆ ಅವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯ ಮೊದಲಿಗೆ ಸ್ಥಿರವಾಗಿತ್ತು. ಆದರೆ ಆ ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟು, ಬೇರೊಂದು ಆಸ್ಪತ್ರಗೆ ದಾಖಲು ಮಾಡಲಾಗಿತ್ತು, ಅಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಮಧ್ಯಾಹ್ನ 1:05 ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
1946 ರಲ್ಲಿ ಹುಟ್ಟಿದ ಅವರು, ಮೊದಲಿಗೆ ರಂಗಭೂಮಿ ಕಲಾವಿದರಾಗಿ ನಟನೆ ಆರಂಭಿಸಿದ್ದರು. ಆ ಬಳಿಕ 1979 ರಲ್ಲಿ ನಿಲಂಬೂರ್ ಬಾಲನ್ ನಿರ್ದೇಶನದ ‘ಅನ್ಯಾರುಡೆ ಭೂಮಿ’ ಚಿತ್ರದ ಮೂಲಕ ಮಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ʼದೂರೆ ದೂರೆ ಓರು ಕೂಡು ಕೂಟಂ’, ‘ಗಾಂಧಿನಗರ್ ಸೆಕೆಂಡ್ ಸ್ಟ್ರೀಟ್, ‘ನಾಡೋಡಿಕ್ಕಟ್ಟು’, ‘ಪಟ್ಟಣಪ್ರವೇಶಂʼ,‘ಉನ್ನಿಕಲೆ ಒರು ಕಧ ಪಾರಾಯಂʼ ‘ವಡಕ್ಕುನೋಕ್ಕಿಯಂʼ, ʼಉಸ್ತಾದ್ ಹೊಟೇಲ್ʼ, ‘ಇಂಡಿಯನ್ ರೂಪೀಸ್,’ ‘ಮಿನ್ನಲ್ ಮುರಳಿʼ, ‘ಕುರುತಿʼ, ‘ತೀರ್ಪ್ಪು ಹೀಗೆ ಸುಮಾರು 450 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಹಾಸ್ಯಪಾತ್ರಗಳಿಂದಲೇ ಗಮನ ಸೆಳೆದ ಅವರು ಎರಡು ಬಾರಿ ತಮ್ಮ ನಟನೆಗೆ ಕೇರಳ ಸ್ಟೇಟ್ ಅವಾರ್ಡ್ ನ್ನು ಪಡೆದುಕೊಂಡಿದ್ದಾರೆ. ( ʼಪೆರುಮಝಕ್ಕಲಂʼ ಮತ್ತು ʼಇನ್ನತೆ ಚಿಂತ ವಿಷಯಂʼ – ಸಿನಿಮಾಗಳು)