ಇತ್ತೀಚೆಗೆ ತೆರೆಗೆ ಬಂದ ‘ದಿ ಕೇರಳ ಸ್ಟೋರಿ’ ಸಿನಿಮಾ ತಂಡಕ್ಕೆ ಈಗ ಅಪಘಾತ ಆಗಿದೆ. ನಟಿ ಅದಾ ಶರ್ಮಾ ಹಾಗೂ ಸಿನಿಮಾ ನಿರ್ದೇಶಕ ಸುದಿಪ್ತೋ ಸೇನ್ಗೆ ಅಪಘಾತದಲ್ಲಿ ಗಾಯಗಳಾಗಿವೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ (ಮೇ 14) ಅದಾ ಶರ್ಮಾ ಹಾಗೂ ಸುದಿಪ್ತೋ ಸೇನ್ ಕರೀಮ್ ನಗರದಲ್ಲಿ ನಡೆಯಬೇಕಿದ್ದ ‘ಹಿಂದೂ ಏಕತಾ ಯಾತ್ರಾ’ದಲ್ಲಿ ಭಾಗಿ ಆಗಬೇಕಿತ್ತು. ಆದರೆ, ಇದಕ್ಕೆ ತೆರಳುವುದಕ್ಕೂ ಮೊದಲೇ ರಸ್ತೆ ಅಪಘಾತ ಉಂಟಾಗಿದೆ. ಈ ಕಾರಣಕ್ಕೆ ಕಾರ್ಯಕ್ರಮ ರದ್ದಾಗಿದೆ. ಅವರಿಗೆ ಅಪಘಾತ ಉಂಟಾಗಿದೆ ಎನ್ನುವ ವಿಚಾರ ಆತಂಕ ಮೂಡಿಸಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.
‘ನಾನು ಆರೋಗ್ಯವಾಗಿದ್ದೀನಿ. ಅಪಘಾತದ ಬಗ್ಗೆ ಸುದ್ದಿ ಹಬ್ಬಿರುವುದರಿಂದ ಸಾಕಷ್ಟು ಮೆಸೇಜ್ಗಳು ಬರುತ್ತಿವೆ. ಇಡೀ ತಂಡ ಹಾಗೂ ನಾವು ಆರೋಗ್ಯವಾಗಿದ್ದೀವಿ. ಗಂಭೀರ ಅಪಘಾತ ಅಲ್ಲ. ನಿಮ್ಮ ಕಾಳಜಿಗೆ ಧನ್ಯವಾದ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅದಾ ಶರ್ಮಾ ಬಗ್ಗೆ ಟೀಕೆ:
ಅದಾ ಶರ್ಮಾ ಸದಾ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾರೆ. ಅವರ ಇನ್ಸ್ಟಾಗ್ರಾಮ್ ಖಾತೆ ತೆರೆದರೆ ಈ ರೀತಿಯ ಹಲವು ಫೋಟೋಗಳು ಸಿಗುತ್ತವೆ. ಸಿನಿಮಾದಲ್ಲೂ ಅವರು ಪಕ್ಕದ ಮನೆಯ ಹುಡುಗಿ ಪಾತ್ರ ಮಾಡಿದ್ದೇ ಹೆಚ್ಚು. ಆ ಪಾತ್ರಗಳನ್ನು ಮಾಡಿ ಗೆಲುವು ಪಡೆದಿರಲಿಲ್ಲ. ಆದರೆ, ‘ದಿ ಕೇರಳ ಸ್ಟೋರಿ’ ಅದಾ ವೃತ್ತಿ ಜೀವನವನ್ನೇ ಬದಲಾಯಿಸಿತು. ಹೀಗಾಗಿ, ಅನೇಕರು ನಟಿಯನ್ನು ಟೀಕಿಸಿದ್ದಾರೆ.
‘ಅದಾ ಶರ್ಮಾ ಎಷ್ಟೇ ಗ್ಲಾಮರಸ್ ಆಗಿ ಕಾಣಿಸಿಕೊಂಡರೂ ಜನರು ಅವರನ್ನು ಗೆಲ್ಲಿಸಲಿಲ್ಲ. ಬುರ್ಖಾ ಹಾಕಿದ ಬಳಿಕ ಅವರಿಗೆ ಯಶಸ್ಸು ಸಿಕ್ಕಿದೆ’ ಎನ್ನುವ ಮಾತುಗಳು ಕೇಳಿ ಬಂದಿವೆ.