ಉಜಿರೆ (ದಕ್ಷಿಣ ಕನ್ನಡ): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬಂಡಾಜೆ ಫಾಲ್ಸ್ ಕಡೆ ಟ್ರೆಕ್ಕಿಂಗ್‌ಗೆ ಬಂದ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾದ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಜೆಪಿ ನಗರದ ಪರೋಸ್ ಅಗರ್ವಾಲ್ ಎಂಬ ಯುವಕ ರಾಣಿಝರಿ ಸಮೀಪದವರೆಗೆ ಬೈಕ್‌ನಲ್ಲಿ ಬಂದಿದ್ದು ಇಲ್ಲಿಂದ ಬಂಡಾಜೆ ಫಾಲ್ಸ್‌ನ ಬದಿಯಿಂದ ಟ್ರೆಕ್ಕಿಂಗ್ ನಡೆಸಿರುತ್ತಾರೆ. ಸಂಜೆಯಾಗುತ್ತಿದ್ದಂತೆ ದಾರಿ ತಪ್ಪಿ ಅಸ್ವಸ್ಥಗೊಂಡಿದ್ದರು. ನಂತರ ತನ್ನ ಮೊಬೈಲ್ ಫೋನ್ ಮೂಲಕ ಬೆಂಗಳೂರಿನ ಸ್ನೇಹಿತರಿಗೆ ವಿಷಯ ತಿಳಿಸಿದರು.
ಅಗರ್ವಾಲ್ ಸ್ನೇಹಿತರು ಹನೀಫ್ ಎಂಬವರಿಗೆ ಕರೆ ಮಾಡಿ ಬಂಡಾಜೆ ಫಾಲ್ಸ್ ನಲ್ಲಿ ನಮ್ಮ ಯುವಕ ಬಾಕಿಯಾಗಿದ್ದಾರೆಂದು ತಿಳಿಸಿದರು. ಕೂಡಲೆ ಹನೀಫ್ ಅವರು ಸಿನಾನ್ ಚಾರ್ಮಾಡಿ ಅವರಿಗೆ ವಿಷಯ ತಿಳಿಸಿದರು. ತಕ್ಷಣ ಕಾರ್ಯ ಪ್ರವೃತರಾದ ಸಿನಾನ್ ಚಾರ್ಮಾಡಿ ಅವರು ಮುಬಾಶೀರ್ ಚಾರ್ಮಾಡಿ, ಅಶ್ರಫ್ ಯಾನೆ ಅಶುರ್, ಸಂಶು ಕಾಜೂರ್, ನಾಸಿರ್ ಕಾಜೂರ್ ಅವರೊಂದಿಗೆ ಘಟನಾ ಸ್ಥಳಕ್ಕೆ ಹೋಗಿ ರಕ್ಷಣಾ ಕಾರ್ಯಕ್ಕೆ ಇಳಿಯುತ್ತಾರೆ. ಸಾಯಂಕಾಲ 6:00 ಗಂಟೆಯ ಸುಮಾರಿಗೆ ರಕ್ಷಣಾ ಕಾರ್ಯ ಆರಂಭಿಸಿದ ಇವರು ರಾತ್ರಿ 12:30 ರ ವೇಳೆಗೆ ಅಗರ್ವಾಲ್ ಇರುವ ಸ್ಥಳಕ್ಕೆ ತಳುಪಿರುತ್ತಾರೆ. ತೀವ್ರ ಅಸ್ವಸ್ಥಗೊಂಡು ಸರಿಯಾಗಿ ನಡೆದಾಡಲಾಗದ ಅಗರ್ವಾಲ್ ಅವರನ್ನು ಯುವಕರು ತಮ್ಮ ಬೆನ್ನಿನ ಮೂಲಕ ಹೊತ್ತುಕೊಂಡು ಬರುವಾಗ ಗುಡ್ಡದ ಮಧ್ಯೆ ಆನೆ ಹಾಗೂ ವನ್ಯಜೀವಿಗಳು ಸಿಕ್ಕಿದರು ಯಾವುದನ್ನು ಲೆಕ್ಕಿಸದೆ ಸುಮಾರು 20 ಕಿ.ಮೀ ದೂರವನ್ನು ಸರಿ ಸುಮಾರು 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೋಮವಾರ ಬೆಳಗಿನ ಜಾವ 4.00 ಗಂಟೆಗೆ ಸುರಕ್ಷಿತವಾಗಿ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು.
ಆತನಿರುವ ಸ್ಥಳ ಪತ್ತೆ ಹಚ್ಚುವುದು ಸುಲಭದ ಮಾತಾಗಿರಲಿಲ್ಲ. ಆ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡಾ ಸರಿಯಾಗಿ ಇರಲಿಲ್ಲ. ಸಂಪೂರ್ಣ ಅರಣ್ಯ ಪ್ರದೇಶವಾದ ಕಾರಣ ಹಾಗೂ ಕತ್ತಲೆ ಇದ್ದುದರಿಂದ ಈತನಿರುವ ನಿಗದಿತ ಸ್ಥಳ ಹುಡುಕಲು ತುಂಬಾ ಕಷ್ಟಕರವಾಗಿತ್ತು. ಕೊನೆಗೆ ಸ್ಯಾಟ್ ಲೈಟ್ ಸಹಾಯದಿಂದ ಸ್ಥಳ ಗುರುತಿಸಲು ಸಹಕಾರಿಯಾಯಿತು ಎಂದು ರಕ್ಷಣೆ ಮಾಡಿದ ಯುವಕರು ತಿಳಿಸಿದ್ದಾರೆ.