ಮೈಸೂರು: ಜಿಲ್ಲೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ಕೊಳ್ಳೇಗಾಲ – ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದ ದೃಶ್ಯ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.
ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇದೀಗ ಅಪಘಾತದ ವಿಡಿಯೋ ಬಹಿರಂಗಗೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ಏಕಾಏಕಿ ಬಸ್ಗೆ ಡಿಕ್ಕಿಯಾಗಿ ಮುದ್ದೆಯಾದ ದೃಶ್ಯ ಮನಕಲಕುವಂತಿದೆ.
ಬಳ್ಳಾರಿ ಮೂಲದ ಒಂದೇ ಕುಟುಂಬದ ಸದಸ್ಯರು ಶನಿವಾರ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಚಾಮುಂಡಿ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗ ಬೆಟ್ಟಗಳಿಗೆ ಭೇಟಿ ನೀಡಿ ಮೈಸೂರಿಗೆ ಹಿಂತಿರುಗುತ್ತಿದ್ದರು. ಇದೇ ವೇಳೆ, ಪಿಂಜರ ಪೋಲ್ ಎಂಬಲ್ಲಿ ಕೊಳ್ಳೇಗಾಲ – ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಬಸ್ಗೆ ಅಪ್ಪಳಿಸಿದೆ.
ಈ ಮಧ್ಯೆ, ಮೃತಪಟ್ಟ 10 ಜನರ ಮನೆಯವರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಟ್ವೀಟ್ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ, ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಈ ಮಧ್ಯೆ, ಘಟನಾ ಸ್ಥಳಕ್ಕೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೋಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಮಹದೇವಪ್ಪ, ಈ ಘಟನೆ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಸಿಎಂ ಸಹಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ನಾನು ಸಹ ಆಸ್ಪತ್ರೆಗೆ ಭೇಟಿ ನೀಡುತ್ತೇನೆ.ಈ ಸಂಬಂಧ ಅಧಿಕಾರಿಗಳ ಬಳಿ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಮೃತಪಟ್ಟವರು ಯಾರೆಲ್ಲ?
ಬಿಳ್ಯಾಳ ಮಂಜುನಾಥ್ (35), ಇವರ ಪತ್ನಿ ಪೂರ್ಣಿಮಾ (30), ಮಗ ಪವನ (10), ಕಾರ್ತಿಕ (08), ಸಂದೀಪ (24), ತಾಯಿ ಸುಜಾತ ( 40), ತಂದೆ ಕೊಟ್ರೇಶ್ (45), ಪತ್ನಿ ಗಾಯತ್ರಿ (35), ಮಗಳು ಶ್ರಾವ್ಯ ( 03) ಹಾಗೂ ಇನೋವಾ ಚಾಲಕ ಮೈಸೂರಿನ ಆದಿತ್ಯ (26) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದೆ. ಮೂವರು ಗಾಯಾಳುಗಳನ್ನು ಬಳ್ಳಾರಿ ಮೂಲದ ಜನಾರ್ದನ್ (45), ಪುನೀತ್ (4), ಶಶಿಕುಮಾರ್(24) ಎಂದು ಗುರುತಿಸಲಾಗಿದ್ದು, ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರಗೆ ರವಾನಿಸಲು ಸಿದ್ಧತೆ ಮಾಡಲಾಗುತ್ತಿದೆ. ಸದ್ಯ ಚಾಮರಾಜನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರವಾಸಕ್ಕೆ ಹೋಗಿದ್ದವರಿಗೆ ಹೊಂಚುಹಾಕಿದ್ದ ಜವರಾಯ
ಒಂದೇ ಕುಟಂಬದವರು ಎಲ್ಲರೂ ಇನೋವಾ ಕಾರಿನಲ್ಲಿ ಪ್ರವಾಸ ತೆರಳಿದ್ದರು. ಶನಿವಾರ ಮೈಸೂರಿಗೆ ಹೊರಟಿದ್ದರು. ಪ್ರವಾಸಕ್ಕೆ ಹೋಗಿದ್ದವರು ಮರಳಿ ಬರುವುದಿಲ್ಲ ಎಂದು ತಿಳಿದು ಸಂಗನಕಲ್ನಲ್ಲಿ ಸ್ಮಶಾನ ಮೌನ ಆವರಿಸಿದೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಡಿಕ್ಕಿಯ ರಭಸಕ್ಕೆ ಇನ್ನೋವಾ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರನ್ನು ಹೊರ ತೆಗೆಯಲು ಸ್ಥಳೀಯರು ಪರದಾಡುವಂತಾಯಿತು. ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಲೋಹದ ಕಟರ್ ಬಳಸಿ ಕಾರಿನಿಂದ ಶವಗಳನ್ನು ಹೊರತೆಗೆದರು
ಪ್ರವಾಸಕ್ಕೆ ತೆರಳಿದ್ದ ಮೂರು ಕುಟುಂಬಗಳ ಬದುಕಿನ ಪಯಣ ಅಂತ್ಯ: ಮೈಸೂರು ಭೀಕರ ಅಪಘಾತದ ಕೊನೆ ಕ್ಷಣದ ವಿಡಿಯೋ!
ಮೈಸೂರು/ಬಳ್ಳಾರಿ: ಮೈಸೂರಿನ ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವಿನ ಭೀಕರ ಅಪಘಾತಕ್ಕೆ 10 ಜನ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ ಕಾರು ಚಾಲಕ ಸೇರಿ ಮೂರು ಕುಟುಂಬಗಳ 9 ಜನ ಸದಸ್ಯರಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದಿಂದ ಮೇ 27 ರಂದು ಮೂರು ಕುಟುಂಬಗಳ 12 ಸದಸ್ಯರು ರೈಲಿನಲ್ಲಿ ಮೈಸೂರಿಗೆ ಪ್ರವಾಸಕ್ಕೆ ಎಂದು ತೆರಳಿದ್ದರು. ಇಂದು ಪ್ರವಾಸ ಮುಗಿಸಿ ಬಾಡಿಗೆ ಕಾರಿನಲ್ಲಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ದುರಂತದ ಭೀಕರ ದೃಶ್ಯ ಬಸ್ನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೃತಪಟ್ಟವರಲ್ಲಿ ಸಂದೀಪ್ (24), ಅವರ ತಂದೆ ಕೊಟ್ರೇಶ್(45), ತಾಯಿ ಸುಜಾತಾ (40) ಒಂದು ಕುಟುಂಬದವರಾಗಿದ್ದರೆ, ಇನ್ನೊಂದು ಕುಟುಂಬದ ಮಂಜುನಾಥ (35), ಪತ್ನಿ ಪೂರ್ಣಿಮಾ(30), ಮಕ್ಕಳಾದ ಕಾರ್ತಿಕ್ (08), ಪವನ್ (10) ಸಾವನ್ನಪ್ಪಿದ್ದಾರೆ. ಇನ್ನು ಮತ್ತೊಂದು ಕುಟುಂಬದ ಗಾಯತ್ರಿ(35), ಮಗಳು ಶ್ರಾವ್ಯ(3) ಮೃತಪಟ್ಟವರು, ಕಾರು ಚಾಲಕ ಆದಿತ್ಯ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಜನಾರ್ದನ, ಅವರ ಮಗ ಪುನೀತ್ ಮತ್ತು ಶಶಿಕುಮಾರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮೈಸೂರು ಎಸ್ಪಿ ಮತ್ತು ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಅಪಘಾತ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಸಂಗನಕಲ್ ಗ್ರಾಮದಲ್ಲಿ ಮುಗಿಲು ಮುಟ್ಟಿದ ಆಕ್ರಂದನ: ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮುಂಜಾನೆ ಸ್ವಗ್ರಾಮಕ್ಕೆ ರವಾನೆ ಮಾಡಲಾಯಿತು. ದುರಂತದ ಸುದ್ದಿ ಬಳಿಕ ಸಂಗನಕಲ್ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ.