ಪುತ್ತೂರು: ರಾಜ್ಯ ಸರಕಾರದಿಂದ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು ಈ ಯೋಜನೆಗಳ ಪೈಕಿ ಒಂದೊಂದೇ ಶೀಘ್ರ ಜಾರಿಯಾಗಲಿದ್ದು ಎಲ್ಲಾ ಯೋಜನೆಗಳೂ ಕಾರ್ಯಕರ್ತರ ಮೂಲಕವೇ ಅನುಷ್ಟಾನಗೊಳ್ಳಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಜೂ. ೧೩ ರಂದು ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಜನರ ಮನೆಗೆ ತಲುಪಿಸಲಿದ್ದಾರೆ. ಬೂತ್ ಅಧ್ಯಕ್ಷರು ಮತ್ತು ವಲಯ ಅಧ್ಯಕ್ಷರುಗಳು ಗ್ಯಾರಂಟಿ ಯೋಜನೆಯನ್ನು ಅನುಷ್ಟಾನಗೊಳಿಸಲಿದ್ದಾರೆ. ಮನೆ ಮನೆಗೆ ತೆರಳಿ ಸರಕಾರದ ಐದು ಗ್ಯಾರಂಟಿ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಮತ್ತು ಇದು ಕಾಂಗ್ರೆಸ್ ಸರಕರದ ಯೋಜನೆಯಾಗಿದೆ ಎಂದು ಪ್ರಚಾರವನ್ನು ಮಾಡಲಿದ್ದಾರೆ.
ಸ್ಥಳೀಯವಾಗಿ ಈ ಯೋಜನೆಯನ್ನು ಸೇವಾ ಕೇಂದ್ರಗಳಲ್ಲಿ ಮಾಡಿಸಿಕೊಳ್ಳದಂತೆ ವ್ಯವಸ್ಥೆ ಮಾಡಬೇಕಿದ್ದು ಯೋಜನೆಯನ್ನು ಯಾವುದೋ ಸೈಬರ್ ಅಥವಾ ಸೇವಾ ಕೇಂದ್ರದಲ್ಲಿ ಹೋಗಿ ಮಾಡಿಸಿಕೊಳ್ಳುವುದು ಬೇಡ. ಪ್ರತೀಯೊಬ್ಬರೂ ಕಾಂಗ್ರೆಸ್ ಕಚೇರಿ, ಶಾಸಕರ ಕಚೇರಿ ಅಥವಾ ಗ್ರಾಮೀಣ ಭಾಗದಲ್ಲಿ ಗ್ಯಾರಂಟಿ ಅನುಷ್ಟಾನಕ್ಕೆಂದೇ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರೇ ಅರ್ಜಿ ತುಂಬಲಿದ್ದಾರೆ ಮತ್ತು ಅದನ್ನು ಕಳಿಸುವ ವ್ಯವಸ್ಥೆ ಮಾಡಲಿದ್ದಾರೆ. ಈ ಯೋಜನೆಯ ಮೂಲಕ ಪ್ರತೀಯೊಬ್ಬ ಮನೆಯವರೂ ಕಾಂಗ್ರೆಸ್ ಸರಕಾರದ ಕೊಡುಗೆಯನ್ನು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.

ಸಾರ್ವಜನಿಕರಿಂದ ಅರ್ಜಿಯನ್ನು ಕಾರ್ಯಕರ್ತರೇ ಸ್ವೀಕರಿಸಿ ಎಲ್ಲರಿಗೂ ಜಾತಿ, ಮತ ಬೇದ, ಪಕ್ಷಾತೀತವಾಗಿ ಎಲ್ಲರಿಗೂ ಯೋಜನೆಗಳನ್ನು ತಲುಪಿಸಲಿದ್ದಾರೆ. ಐದೂ ಯೋಜನೆಯೂ ಪಕ್ಷದ ಮೂಲಕವೇ ತಲುಪಬೇಕು, ಕ್ಷೇತ್ರದ ಎಲ್ಲಾ ಮನೆಗಳಿಗೂ ಕಾರ್ಯಕರ್ತರು ಭೇಟಿ ನೀಡಿ ಈ ಕೆಲಸವನ್ನು ಮಾಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮಾಡಿದ್ದು ಎಂದು ಗೊತ್ತಾಗಬೇಕು: ಎಂ.ಬಿ
ಐದು ಗ್ಯಾರಂಟಿ ಯೋಜನೆ ಕಾಂಗ್ರೆಸ್ ಸರಕಾರ ಮಾಡಿದ್ದು ಎಂದು ಎಲ್ಲರಿಗೂ ಗೊತ್ತಾಗಬೇಕು, ಇದಕ್ಕಾಗಿ ಕಾರ್ಯಕರ್ತರೇ ಈ ಯೋಜನೆಯನ್ನು ಮನೆ ಮನೆಗೆ ತಲುಪಿಸಬೇಕು. ನಮ್ಮ ಸರಕಾರದ ಉತ್ತಮ ಯೋಜನೆಯನ್ನು ನಮ್ಮದೆಂದು ಸುಳ್ಳು ಹೇಳಿ ಜನರನ್ನು ನಂಬಿಸಿ ಅದರ ಲಾಭವನ್ನು ಪಡೆಯಬಹುದಾದ ಸಾಧ್ಯತೆ ಇರುವುದರಿಂದ ವಲಯ ಅಧ್ಯಕ್ಷರುಗಳು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಈ ಯೋಜನೆಯನ್ನು ನಮ್ಮ ಯೋಜನೆ ಎಂದೂ ಎಲ್ಲಿಗೂ ತಿಳಿಸಬೇಕಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ ಈ ಯೋಜನೆಯನ್ನು ನಾವು ಅತ್ಯಂತ ಸರಳೀಕರಣ ವ್ಯವಸ್ಥೆಯ ಮೂಲಕ ಜಾರಿ ಮಾಡಬೇಕು. ಅಧಿಕಾರಿಗಳನ್ನು ನಂಬಿದರೆ ಅದು ಸಾಧ್ಯವಾಗದ ಕೆಲಸ ಅವರು ಆಕೆಲಸವನ್ನು ಮಾಡುವುದೇ ಇಲ್ಲ. ನಾವೇ ಯೋಜನೆಯು ಜನರಿಗೆ ತಲುಪಿಸುವಲ್ಲಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಲಾರೆನ್ಸ್ ಡಿಸೋಜಾ, ಮತ್ತು ರಾಜೀವ ಗಾಂಧಿ ಪಂಚಾಯತ್ ರಾಜ್ ಅಧ್ಯಕ್ಷರಾದ ಸುಬಾಶ್ಚ್ರಂದ್ರ ಶೆಟ್ಟಿ ಕೊಲ್ನಾಡು ರವರು ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.