ಶಾಲಾ ಬಸ್ ಹರಿದು 2ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಎಂ.ಮೇಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಿವ್ಯಾಂಶು ಸಿಂಗ್(8) ಮೃತ ಬಾಲಕ.ಬಿದರಗೆರೆಯ ಎಸ್.ಎಸ್.ವಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ ದಿವ್ಯಾಂಶು, ನಿನ್ನೆ(ಜು.06) ಸಂಜೆ 6 ಗಂಟೆಗೆ ಟ್ಯೂಷನ್ ಮುಗಿಸಿ ಶಾಲಾ ವಾಹನದಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಅದೇ ಶಾಲೆಯ ವಾಹನದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಚಾಲಕನ ಬೇಜವಾಬ್ದಾರಿಗೆ ಬಾಲಕ ಬಲಿ: ಮೇಡಹಳ್ಳಿಯ ಸಾಯಿ ಪ್ಯಾರಡೈಸ್ ಬಡಾವಣೆಯಲ್ಲಿ ವಾಸವಿದ್ದ ದಿವ್ಯಾಂಶು ಪೋಷಕರು, ಎಂದಿನಂತೆ ಮಗನನ್ನು ಶಾಲೆಗೆ ಕಳಿಸಿದ್ದಾರೆ. ದಿವ್ಯಾಂಶು ಶಾಲೆಗೆ ಹೋಗಿ ಸಂಜೆ ಟ್ಯೂಷನ್ ಮುಗಿಸಿ ಶಾಲಾ ಬಸ್ನಲ್ಲಿಯೇ ಹಿಂತಿರುಗುತ್ತಿದ್ದ. ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ಶಾಲಾ ವಾಹನದಲ್ಲಿ ಮನೆ ಸಮೀಪ ಇಳಿದಿದ್ದ ದಿವ್ಯಾಂಶು, ಶಾಲಾ ವಾಹನದ ಮುಂಭಾಗದಿಂದ ರಸ್ತೆ ದಾಟಿ ಮನೆಯ ಕಡೆಗೆ ಹೋಗಲು ಮುಂದಾಗಿದ್ದಾನೆ. ಈ ವೇಳೆ ಚಾಲಕನ ಅಜಾಗರುಕತೆಯಿಂದ ಬಾಲಕನ ಮೇಲೆ ಬಸ್ ಹರಿದಿದೆ.
ಶಾಲಾ ವಾಹನದ ಚಕ್ರಕ್ಕೆ ಸಿಲುಕಿ ಬಾಲಕ ಮೃತಪಟ್ಟಿದ್ದಾನೆ. ವಾಹನಕ್ಕೆ ಸಿಬ್ಬಂದಿ ನೇಮಿಸದೆ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದು ಚಾಲಕನ ಬೇಜವಾಬ್ದಾರಿಗೆ ಪುಟ್ಟ ಬಾಲಕನ ಜೀವ ಹೋಗಿದೆ.
ಶಾಲಾ ಮಕ್ಕಳನ್ನ ಜೋಪಾನವಾಗಿ ವಾಹನದಿಂದ ಇಳಿಸಿದ ಬಳಿಕ ಶಾಲಾ ಸಿಬ್ಬಂದಿ ರಸ್ತೆ ದಾಟಿಸಿ ಬರಬೇಕು. ಆದ್ರೆ ಶಾಲಾ ಬಸ್ ನಲ್ಲಿ ಡ್ರೈವರ್ ಹೊರತುಪಡಿಸಿ ಕ್ಲೀನರ್ ಸೇರಿದಂತೆ ಯಾವೊಬ್ಬ ಸಿಬ್ಬಂದಿಯು ಇರಲಿಲ್ಲ. ಹೀಗಾಗಿ ಈ ದುರಂತ ಸಂಭವಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಬಾಲಕನ ಮೃತದೇಹ ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.