ಮಂಡ್ಯ: ಜಿಂಕೆ ಭೇಟೆಯಾಡಿದ್ದ ಕಾಡುಗಳ್ಳನನ್ನು ವನಪಾಲಕರು ಶೂಟೌಟ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ.ನಾಲ್ವರು ಕಾಡುಗಳ್ಳರು ಬಂದೂಕಿನಿಂದ 2 ಜಿಂಕೆಗಳನ್ನು ಕೊಂದು ಹೆಗಲ ಮೇಲೆ ಹೊತ್ತಿಕೊಂಡು ಬರುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ವನಪಾಲಕರಿಗೆ ಈ ಕಳ್ಳರ ಗ್ಯಾಂಗ್ ಸಿಕ್ಕಿ ಬಿದ್ದಿದೆ. ತಕ್ಷಣ ಎಚ್ಚೆತ್ತ ವನಪಾಲಕರು ಅವರನ್ನು ಹಿಡಿಯಲು ಮುಂದಾಗಿದ್ದಾರೆ.
ಬೇಟೆಗೆಂದು ಅರಣ್ಯಕ್ಕೆ ತೆರಳಿದ್ದ ಈ ತಂಡದವರು ಬಂದೂಕು ಉಪಯೋಗಿಸಿ ಜಿಂಕೆಯೊಂದನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಶಿಕಾರಿಗೆಂದು ಇವರು ತೆರಳಿದ್ದು, ಅದೇ ಸಂದರ್ಭದಲ್ಲಿ ವನಪಾಲಕರು ಗಸ್ತಿಗೆ ತೆರಳಿದ ಪರಿಣಾಮ ವಿಷಯ ಬೆಳಕಿಗೆ ಬಂದಿದೆ. ಹಲಗೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಗುಂಡೇಟು ತಿಂದ ವೆಂಕಟೇಶ್ ಎಂಬಾತನಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತೆಯೇ ತಪ್ಪಿಸಿಕೊಂಡ ಮೂವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ತನಿಖೆ ಮುಂದುವರೆದಿದೆ.