ಕೊಡಗು: ವಿಪರೀತ ಮಳೆಗೆ ಬೈಕ್ ಸ್ಕಿಡ್ ಆಗಿ ಬಿದ್ದು ತಕ್ಷಣ ಹಿಂದಿನಿಂದ ಬಂದ ಲಾರಿಯೊಂದು ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿಯ ಸಂಪಿಗೆ ಕಟ್ಟೆ ಬಳಿ ನಡೆದಿದೆ. ಮೃತರ ಬ್ಯಾಗ್ನಲ್ಲಿ ಸಿಕ್ಕ ಆಮಂತ್ರಣ ಪತ್ರಿಕೆಯಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ ಬಳಿಕ ಮೃತರ ಗುರುತು ಪತ್ತೆಯಾಗಿದೆ. ಹಸೆಮಣೆ ಏರಬೇಕಿದ್ದ ಯುವಕ ಮಸಣ ಸೇರಿದ್ದಾನೆ. ಮೈಸೂರಿನ ಯುವ ವಕೀಲ ವಿಶ್ವನಾಥ್ ಮತ್ತು ಆತನ ಸಂಬಂಧಿ ದಿನೇಶ್ ಮೃತರು.
ವಕೀಲ ವಿಶ್ವನಾಥ್, ಮದುವೆ ಆಮಂತ್ರಣ ನೀಡಲು ಪಿರಿಯಾಪಟ್ಟಣಕ್ಕೆ ಬಂದು ಅಲ್ಲಿ ತನ್ನ ಸೋದರ ಮಾವನ ಕುಟುಂಬವನ್ನ ಆಮಂತ್ರಿಸಿದ್ದ. ಬಳಿಕ ಭಾವಮೈದ ದಿನೇಶ್ನನ್ನು ಬೈಕ್ ಹತ್ತಿಸಿಕೊಂಡು ಮಡಿಕೇರಿಯಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿದ್ರು. ಮಡಿಕೇರಿ ಸಮೀಪ ಮಳೆಯ ಕಾರಣ ದಟ್ಟ ಮಂಜು ಆವರಿಸಿದ್ದು, ಈ ವೇಳೆ ಲಾರಿಯೊಂದನ್ನು ಓವರ್ ಟೇಕ್ ಮಾಡಲು ವಿಶ್ವನಾಥ್ ಯತ್ನಿಸಿದ್ದಾರೆ. ಆಗ ಲಾರಿಗೆ ಬೈಕ್ ತಾಗಿ ಇಬ್ಬರೂ ಕೆಳಕ್ಕುರುಳಿದ್ದಾರೆ. ಈ ವೇಳೆ ವಿಶ್ವನಾಥ್ ಮತ್ತು ದಿನೇಶ್ ಮೇಲೆ ಲಾರಿ ಹರಿದಿದ್ದು ತಕ್ಷಣ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತವೆಸಗಿದ ಲಾರಿ ಚಾಲಕನನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ.