ನೆಲ್ಯಾಡಿ: ಉದನೆಯಲ್ಲಿ ಗಣೇಶೋತ್ಸವಕ್ಕೆ ಶೃಂಗರಿಸಿದ್ದ ಗಣಪತಿ ಕಟ್ಟೆಯನ್ನು ಹಾನಿಗೊಳಿಸಿರುವ ಘಟನೆ ಮೊನ್ನೆ ರಾತ್ರಿ ನಡೆದಿತ್ತು. ಪ್ರಕರಣಕ್ಕೆ ಸಂಭಂದಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ 24 ಗಂಟೆಯ ಒಳಗಡೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸುಬೀಂದ್ರ ಎಂಬವರ ಪುತ್ರ
ರವೀಂದ್ರ ಕುಮಾರ್(25) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಉದನೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಶುಕ್ರವಾರದಂದು ಸರಳವಾಗಿ ಹಬ್ಬವನ್ನು ಆಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ಹೊತ್ತು ಆರೋಪಿ ರವೀಂದ್ರ ಕುಮಾರ್ ಬಾಳೆಗಿಡಗಳನ್ನು ಪುಡಿಗೈದಿದ್ದು, ಕಲ್ಲು ಎತ್ತಿಹಾಕಿ ಮೆಟ್ಟಿಲನ್ನು ಹಾನಿಗೊಳಿಸಿದ್ದಾನೆ.
ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನ ಸ್ಥಳಕ್ಕೆ ಹಿಂದೂ ಜಾಗರಣೆ ವೇದಿಕೆ ಮುಖಂಡರು ಭೇಟಿ ನೀಡಿ ಕೃತ್ಯದ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಆರೋಪಿಗಳನ್ನು ತಕ್ಷಣ ಬಂಧಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದರು.
ಇದೀಗ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಂಧಿತ ಆರೋಪಿ ಬಿಹಾರದ ಬಾಗಲ್ ಪುರ ಜಿಲ್ಲೆಯ ಗೋಪಾಲ್ ಪುರ್ ತಾಲೂಕಿನ ಗರ್ನಿಯಾ ನಿವಾಸಿ ಎಂದು ತಿಳಿದು ಬಂದಿದೆ.