ಮಡಿಕೇರಿ: ಶ್ರೀ ನಾರಾಯಣ ಗುರು ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಹಾಗು ಕೊರೋನಾ ವಾರಿಯಸ್೯ ಇಬ್ಬರಿಗೆ ಸನ್ಮಾನ ಕಾರ್ಯಕ್ರಮವನ್ನು ಮಡಿಕೇರಿಯ ಪತ್ರಿಕಾ ಭವನ ಸಭಾಂಗಣದಲ್ಲಿ ದ.ಸಂ ಸಮಿತಿಯ ಮಡಿಕೇರಿ ನಗರ ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಹೆಚ್.ಎಲ್ ದಿವಾಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದಲಿತ ಮತ್ತು ಹಿಂದುಳಿತ ವರ್ಗದ ಮಕ್ಕಳು ಹೆಚ್ಚು ವಿದ್ಯಾಭ್ಯಾಸ ಪಡೆಯುವಂತಾಗಬೇಕು. ಉನ್ನತ ಶಿಕ್ಷಣವನ್ನು ಪಡೆದು ದೊಡ್ಡ ಸ್ಥಾನವನ್ನು ಏರಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಮಡಿಕೇರಿ ನಗರ ಸಭೆ ಪೌರಾಯುಕ್ತರಾದ ಹೆಚ್.ವಿ ರಾಮ್ ದಾಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಿಕ ಸಮಾನತೆಯ ಬದಲಾವಣೆ ಬರಲು ಸಮಾಜ ಸುಧಾರಕರೇ ಕಾರಣೀಕರ್ತರು. ನಾರಾಯಣ ಗುರು ಅವರಂತಹ ಮಹನೀಯರ ಸ್ಮರಣೆ ಮಾಡುವುದು ಅರ್ಥಪೂರ್ಣ ಎಂದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ ಪಿ ರಮೇಶ್ ಅವರು ನಾರಾಯಣ ಗುರು ಅವರ ಕುರಿತಾಗಿ ಹಲವಾರ ಪ್ರಮುಖ ವಿಚಾರಗಳನ್ನು ಮಂಡನೆ ಮಾಡಿದರು. ಈ ಸಂದರ್ಭ ಶ್ರೀ ನಾರಾಯಣ ಗುರು ಅವರ ಸಂಪೂರ್ಣ ಇತಿಹಾಸವನ್ನು ವಿವರಿಸಿದ್ದಲ್ಲದೆ. ನಾರಾಯಣ ಗುರುಗಳಂತಹಾ ಮಹಾನುಭಾವರನ್ನು ನಾವು ಇಂದಿಗೂ ಅರಿತು ಕೊಳ್ಳುವ ಮಹತ್ವದ ಕುರಿತು ವಿಶ್ಲೇಷಣೆ ನೀಡಿದರು ಹಾಗು ನಾರಾಯಣ ಗುರುಗಳ “ಮನುಷ್ಯರೆಲ್ಲರೂ ಒಂದೇ, ದೇವರೂ ಒಬ್ಬನೇ, ಇಲ್ಲಿ ಮೇಲು ಕೀಳು ಎನ್ನುವುದಿಲ್ಲ” ಎನ್ನುವ ತತ್ವ ಸಿದ್ಧಾಂತವನ್ನು ನಾವು ಅಳವಡಿಸಿಕೊಂಡು ಬದುಕುವುದು ಅನಿವಾರ್ಯ ಎಂದರು.
ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಪ್ರಥಮ ದರ್ಜೆ ಗುತ್ತಿಗೆದಾರ ಹಾಗು ಸಮಾಜ ಸೇವಕ ರವೀಂದ್ರ ರೈ ಅವರು ಕೊಡಗು ಜಿಲ್ಲಾ ದ.ಸಂ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು ಹಾಗು ಅವರು ಶಿಕ್ಷಣದ ಕುರಿತು ಹಾಗು ಕೋವಿಡ್ ಸಂದರ್ಭ ಮಾಡಿದ ಸೇವೆಯನ್ನು ಈ ಸಂದರ್ಭ ಸ್ಮರಿಸಿದರು.ಮತ್ತೊಬ್ಬ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ನಮ್ಮ ಕೊಡಗು ತಂಡದ ಸ್ಥಾಪನಾಧ್ಯಕ್ಷ ಹಾಗು ಯುವ ಸಾಹಿತಿ ನೌಶಾದ್ ಜನ್ನತ್ ಹತ್ತೊಂಬತ್ತನೇ ಶತಮಾನ ಹಿಂದೆ ಇದ್ದ ತೀವ್ರತರವಾದ ಅಸ್ಪರ್ಶತೆ ಹಾಗು ದಲಿತ ಹಾಗು ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯದ ಕುರಿತು ಮಾತನಾಡುತ್ತಾ. ಕೇರಳದಲ್ಲಿ ಹಿಂದುಳಿದ ಜನಾಂಗಗಳ ತುಳಿತಕ್ಕೆ ಪ್ರತಿರೋಧ ಒಡ್ಡಿ ಹೇಗೆ ನಾರಾಯಣ ಗುರುಗಳು ಪ್ರಪಂಚಕ್ಕೆ ಮಾದರಿಯಾದರೂ ಎನ್ನುವ ಕುರಿತು ಸಂಕ್ಷಿಪ್ತವಾಗಿ ವಿವರಿಸುವ ಮೂಲಕ ಗಮನಸೆಳೆದರು.
ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪನವರು ಮಾತನಾಡಿ ಕೇರಳದಲ್ಲಿ ದಲಿತ ಹಾಗು ಹಿಂದುಳಿದ ವರ್ಗದ ಮಹಿಳೆಯರಿಗೆ ಸೊಂಟದಿಂದ ಮೇಲೆ ಬಟ್ಟೆ ಹಾಕುವ ಸ್ವತಂತ್ರವೂ ಇರಲಿಲ್ಲ ಅಂತಹ ವಿಚಿತ್ರ ಹಾಗು ಅಮಾನವೀಯ ಕಾನೂನು ಕೇರಳದಲ್ಲಿ ಶತಮಾನಗಳ ಹಿಂದೆ ಇತ್ತು ಹಾಗೂ ಬಟ್ಟೆ ಧರಿಸಬೇಕಾದರೆ ಅದಕ್ಕೆ ಪ್ರತ್ಯೇಕ ತೆರಿಗೆಯನ್ನು ಸವರ್ಣೀಯರಿಗೆ ಕೊಡಬೇಕಾಗಿತ್ತು ಇಂತಹಾ ಅಶ್ಲೀಲ ನೀತಿಯ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿ ಕಾನೂನು ಬದಲಿಸುವಲ್ಲಿ ನಾರಾಯಣ ಗುರುಗಳ ಪಾತ್ರ ಕೂಡ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ನಗರ ಸಂಚಾಲಕ ಸಿದ್ದೇಶ್ವರ್ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಡಿಕೇರಿ ನಗರದ ಪ್ರತಿಭಾನ್ವಿತ ಹದಿನೈದು ದಲಿತ ವಿದ್ಯಾರ್ಥಿಗಳಿಗೆ ಹಾಗು ಕೊಡಗಿನ ಮೆಡಿಕಲ್ ಕಾಲೇಜಿನ ಶವಪರೀಕ್ಷಾ ವಿಭಾಗದ ನೌಕರರಾದ ಹಾಗು ಕೋವಿಡ್ ಸಂದರ್ಭ ಸುಮಾರು ನಾನೂರಕ್ಕೂ ಹೆಚ್ಚಿನ ಕೋವಿಡ್ ಸೋಂಕಿತ ಶವಗಳನ್ನು ಪ್ಯಾಕ್ ಮಾಡಿದ ಹೆಗ್ಗಳಿಕೆಗೆ ಭಾಜೀನರಾಗಿರುವ ರಾಬರ್ಟ್ ಹಾಗು ಸಯ್ಯದ್ ಅವರನ್ನು ಸನ್ಮಾನಿಸಿ ಗೌರವಿಸಲಾಯ್ತು.