ಯು.ಎ.ಇ, ಸೆ.19: ಕ್ರಿಕೆಟ್ ಅಭಿಮಾನಿಗಳ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಐಪಿಎಲ್ ಯುಎಇಯಲ್ಲಿ ಪುನರಾರಂಭಗೊಂಡಿದೆ. ಐಪಿಎಲ್ 2021 ಸೀಸನ್‌ನ ಎರಡನೇ ಭಾಗವು ಇಂದಿನಿಂದ ದುಬೈನಲ್ಲಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ಗಾಯಕವಾಡ್ ಬಿರುಸಿನ ಆಟ, ಚೆನ್ನೈ ಸವಾಲಿನ ಮೊತ್ತ:
ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕವಾಡ್ ಆಕರ್ಷಕ ಅರ್ಧಶತಕದ (88*) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ಒಂದು ಹಂತದಲ್ಲಿ 24ಕ್ಕೆ ನಾಲ್ಕು ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಗಾಯಕವಾಡ್ ನೆರವಾದರು. ರವೀಂದ್ರ ಜಡೇಜ (26) ಹಾಗೂ ಡ್ವೇನ್ ಬ್ರಾವೋ (23) ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಫಾಫ್ ಡು ಪ್ಲೆಸಿ (0) ಹಾಗೂ ಮೊಯಿನ್ ಅಲಿ (0) ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಈ ನಡುವೆ ಗಾಯಗೊಂಡ ಅಂಬಟಿ ರಾಯುಡು (0) ರನ್’ಗೆ ಔಟ್ ಆದರು. ಅನುಭವಿ ಆಟಗಾರ ಸುರೇಶ್ ರೈನಾ (4) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (3) ಅವರಿಂದಲೂ ಹೆಚ್ಚೇನು ಮಾಡಲಾಗಲಿಲ್ಲ. ಈ ವೇಳೆ ತಲಾ ಎರಡು ವಿಕೆಟ್‌ಗಳನ್ನು ಪಡೆದ ಟ್ರೆಂಟ್ ಬೌಲ್ಟ್ ಹಾಗೂ ಆ್ಯಡಂ ಮಿಲ್ನೆ ಮಿಂಚಿದರು.
ಪರಿಣಾಮ ಪವರ್ ಪ್ಲೇ ಅಂತ್ಯಕ್ಕೆ 24 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ರವೀಂದ್ರ ಜಡೇಜ ಜೊತೆಗೂಡಿದ ಆರಂಭಿಕ ಆಟಗಾರ ಋತುರಾಜ್ ಗಾಯಕವಾಡ್ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಾಯಕವಾಡ್ ಗಮನ ಸೆಳೆದರು. 15 ಓವರ್ ಅಂತ್ಯಕ್ಕೆ ಚೆನ್ನೈ ನಾಲ್ಕು ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿತ್ತು.
ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್, ಐಪಿಎಲ್‌ನಲ್ಲಿ 6ನೇ ಅರ್ಧಶತಕ ಸಾಧನೆ ಮಾಡಿದರು. ಇನ್ನೊಂದೆಡೆ ಗಾಯಕವಾಡ್‌ಗೆ ಉತ್ತಮ ಸಾಥ್ ನೀಡುತ್ತಿದ್ದ ಜಡೇಜರನ್ನು ಬೂಮ್ರಾ ಹೊರದಬ್ಬಿದರು. ಇದರೊಂದಿಗೆ ಐದನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟವು ಮುರಿದು ಬಿತ್ತು. 33 ಎಸೆತಗಳನ್ನು ಎದುರಿಸಿದ ಜಡೇಜ ಒಂದು ಬೌಂಡರಿ ನೆರವಿನಿಂದ 26 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ಡ್ವೇನ್ ಬ್ರಾವೋ ಕೇವಲ ಏಳು ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 23 ರನ್ ಗಳಿಸಿ ಗಮನ ಸೆಳೆದರು. ಅಲ್ಲದೆ ಋತುರಾಜ್ ಜೊತೆ ಸೇರಿಕೊಂಡು ಬೌಲ್ಟ್ ಎಸೆದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ 24 ರನ್‌ಗಳನ್ನು ಸೊರೆಗೈದರು.
ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿತ್ತು. ಅಮೋಘ ಆಟದ ಪ್ರದರ್ಶನ ನೀಡಿದ ಗಾಯಕವಾಡ್ 88 ರನ್ ಗಳಿಸಿ ಅಜೇಯರಾಗುಳಿದರು. 58 ಎಸೆತಗಳನ್ನು ಎದುರಿಸಿದ ಗಾಯಕವಾಡ್ ಒಂಬತ್ತು ಬೌಂಡರಿ ಹಾಗೂ ನಾಲ್ಕು ಮನಮೋಹಕ ಸಿಕ್ಸರ್‌ಗಳನ್ನು ಬಾರಿಸಿದ್ದರು. ಮುಂಬೈ ಪರ ಬೌಲ್ಟ್, ಬೂಮ್ರಾ ಹಾಗೂ ಮಿಲ್ನೆ ತಲಾ ಎರಡು ವಿಕೆಟ್‌ಗಳನ್ನು ಹಂಚಿದರು.