ಮಂಗಳೂರು: ಮೈಸೂರು ದೇಗುಲ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಬಿಟ್ಟಿಲ್ಲ ನಾವು. ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಹತ್ಯೆ ಮಾಡಲಾಗಿದೆ. ಅಂತಹ ಸಂದರ್ಭದಲ್ಲಿ ನೀವು ಯಾವ ಲೆಕ್ಕ ಬೊಮ್ಮಾಯಿಯವರೇ. ನಿಮ್ಮ ವಿಚಾರದಲ್ಲಿ ಅಲೋಚನೆ ಮಾಡಲು ಸಾಧ್ಯವಿಲ್ಲ ಅಂದುಕೊಳ್ಳಬೇಡಿ ದೇಗುಲ ಧ್ವಂಸ ಮಾಡಿರೋದು ಒಂದು ಕೊಲೆಗೆ ಸಮಾನ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇವಾಲಯ ಧ್ವಂಸದ ಮೂಲಕ ಅಲ್ಪಸಂಖ್ಯಾತ ಮತಗಳಿಕೆ ಪ್ರಯತ್ನ ಮಾಡುತ್ತಿದ್ದೀರಿ. ಬಿಜೆಪಿಯಿಂದ ಅಲ್ಪಸಂಖ್ಯಾತರ ಓಲೈಕೆಯಾಗುತ್ತಿದೆ. ಬೊಮ್ಮಾಯಿಯವರೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಧಾರ್ಮಿಕ ದತ್ತಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಯವರೇ ನೀವು ಮೊಟ್ಟೆ ಕದ್ದು ಹಣಮಾಡಿದ್ದೀರಿ. ಇದೀಗ ದೇವಸ್ಥಾನಗಳನ್ನು ಧ್ವಂಸ ಮಾಡಿ ಯಾಕೆ ದುಡ್ಡು ಮಾಡಲು ಹೊರಟಿದ್ದೀರಿ. ಸಂಘಪರಿವಾರ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡೋದು ಅಲ್ಲ. ಪರಿವಾರ ಸಂಘಟನೆಗಳು ಬಿಜೆಪಿಯನ್ನೇ ಬಹಿಷ್ಕಾರ ಮಾಡಲಿ ಎಂದು ವಾಗ್ದಾಳಿ ನಡೆಸಿದರು.