ಸೂರತ್: ಸೂರತ್ನ 18 ವರ್ಷದ ಯುವತಿಯೋರ್ವಳು ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ಹೆತ್ತ ತಂದೆ ತಾಯಿಗೆ ಆಹಾರದಲ್ಲಿ ವಿಷ ಹಾಕಿದ್ದಾಳೆ. ಆರೋಪಿತ ಯುವತಿಯನ್ನು ಖುಷ್ಬು ಎಂದು ಗುರುತಿಸಲಾಗಿದೆ.
10ನೇ ತರಗತಿಯವರೆಗೆ ಓದಿದ್ದ ಆಕೆಯ ಪ್ರಿಯಕರ ಸಚಿನ್ ಎಂಬುವವನ ಜತೆ ಓಡಿ ಹೋಗಲು ನಿರ್ಧಾರ ಮಾಡಿದ್ದಳು. ಇದಕ್ಕೆ ಪೋಷಕರು ಅಡ್ಡಿಯಾದ್ದರಿಂದ, ಆಹಾರದಲ್ಲಿ ವಿಷ ಹಾಕಿ ನೀಡಿದ್ದಾಳೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಖುಷ್ಬು ಮತ್ತು ಸಚಿನ್ ಕುಟುಂಬವು ಸೂರತ್ನ ದಿಂಡೋಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಇಬ್ಬರಿಗೂ ಸ್ನೇಹ ಬೆಳೆದಿದೆ. ದಿನ ಕಳೆಯುತ್ತಿದ್ದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ. ಖುಷ್ಬು ಅಪ್ರಾಪ್ತ ವಯಸ್ಸಿನವಳಾದ್ದರಿಂದ ಪೋಷಕರು ಆ ಸಂಬಂಧವನ್ನು ನಿರಾಕರಿಸಿದ್ದಾರೆ. ಇದರಿಂದಾಗಿ ಬೇಸರಗೊಂಡ ಖುಷ್ಬು ಸಚಿನ್ನೊಡನೆ ಮನೆಬಿಟ್ಟು ಓಡಿ ಹೋಗಿದ್ದಳು. ಖುಷ್ಬು ಕುಟುಂಬ ಅವರಿರುವ ಜಾಗವನ್ನು ಹುಡುಕಿ ಮರಳಿ ಮನೆಗೆ ಕರೆತಂದಿದ್ದರು. ಪ್ರೀತಿಯ ಮೋಹದಿಂದ ಖುಷ್ಬುವಿನ ಮನ ಬದಲಾಯಿಸಲು ಆ ನಗರವನ್ನು ಬಿಟ್ಟು ಬೇರೆಡೆಗೆ ಹೋಗಿ ವಾಸವಿದ್ದರು.
ಸೆಪ್ಟೆಂಬರ್ 12ನೇ ತಾರೀಕಿನಂದು ಮೆಡಿಕಲ್ ಸ್ಟೋರ್ಸ್ನಿಂದ ಒಂದಿಷ್ಟು ಮಾತ್ರೆಗಳನ್ನು ತಂದು ಆಹಾರದಲ್ಲಿ ಬೆರೆಸಿ ಮನೆಯವರಿಗೆಲ್ಲಾ ನೀಡಿದ್ದಾಳೆ. ಸ್ವಲ್ಪ ಸಮಯದ ಬಳಿಕ ಮನೆಯವರು ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಿದ್ದಂತೆಯೇ ಸಚಿನ್ ಆಕೆಯ ಮನೆಗೆ ಬಂದು ಖುಷ್ಬುಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.
ಆಕೆಯ ತಂದೆ ವಂಜಾರಾ ಅವರಿಗೆ ಎಚ್ಚರವಾದ ಬಳಿಕ, ಎಚ್ಚರ ತಪ್ಪಿ ಬಿದ್ದಿದ್ದ ಮನೆಯವರನ್ನು ಎದ್ದೇಳಿಸಲು ಪ್ರಯತ್ನಿಸಿದ್ದಾರೆ. ಈ ಕಡೆ ಖುಷ್ಬು ಮತ್ತು ಸಚಿನ್ ಮದುವೆಯಾಗಲು ಪೊಲೀಸ್ ಠಾಣೆಯನ್ನು ತಲುಪಿದ್ದಾರೆ. ಖುಷ್ಬು ತಾಯಿ ಮತ್ತು ಸಹೋದರನ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಆಸ್ಪತ್ರೆಗೆ ಕರೆತರಲಾಗಿದೆ. ತಂದೆ ವಂಜಾರಾ ಅವರು ಖುಷ್ಬು, ಸಚಿನ್ ಮತ್ತು ಸಚಿನ್ ತಂದೆ ಅಶೋಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿತೂರಿ ಮಾಡಿ ವಿಷ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.