ಬಾ..ನನ್ನ ಕೊಂದು ಬಿಡು.
ಕವಿ: ಜಲೀಲ್ ಮುಕ್ರಿ
ಮಾನವತೆ ಮರೆತ ಜಗತ್ತಲ್ಲಿ
ವ್ಯರ್ಥ ಪದ
ಪೋಣಿಸುತ್ತಿದ್ದೇನೆ…
ಇಲ್ಲಿರುವ ಸ್ವರ್ಗಕ್ಕೆ
ಬೆಂಕಿ ಹಚ್ಚಿ
ಅಲ್ಲಿ ಸ್ವರ್ಗ ಹುಡುಕುತ್ತಿದ್ದೇನೆ..
ಸೃಷ್ಟಿಕರ್ತನ
ಖುಷಿಪಡಿಸಲು
ಸೃಷ್ಟಿ ಯೊಂದಿಗೆ ಕ್ರೂರತೆ ತೋರಿಸುತ್ತಿದ್ದೇನೆ
ಹಸಿದ ಹೊಟ್ಟೆ ಹರಿದ ಬಟ್ಟೆ
ಆದರೂ
ಜೀವಿಸಲು ಆವಕಾಶ ಕೊಡದೆ
ನೀನೆಷ್ಟು ಕ್ರೂರಿಯಾದೆ…
ಜಾತಿ ಧರ್ಮದ
ದೈತ್ಯ ಅಲೆಯಬ್ಬಿಸಿ
ಎಷ್ಟೊಂದು ಜನರ ಕೊಂದೆ..
ದೇವನು ಮುನಿಯದಿರುವನೇ?
ಮಂದಿರ ಮಸೀದಿ ಮುಚ್ಚಿ
ಹೆಣವನ್ನು ನೋಡದೆ ,ಮುಟ್ಟದೆ
ಎಸೆದು ದಿನಗಳೇ ಕಳೆಯಲಿಲ್ಲ
ಮರೆತೆಯಾ ಕೊರೋನ ಶಿಕ್ಷೆಯಾ…
ವೈರಾಣುವಿನ ರೌದ್ರ ನರ್ತನ
ಇನ್ನೂ ನಿಂತಿಲ್ಲ..
ಶವದ ಮೇಲೆ ಮಾಡುತ್ತಿರುವಿ ನೀ ನರ್ತನ
ಪ್ರಾಣವಾಯುವೆ ಇಲ್ಲ
ಪ್ರಾಣ ತೆಗೆಯುತ್ತಿಯಲ್ಲಾ…..
ಹೊರಲು ಜನರಿಲ್ಲ,
ಹೂಳಲು ಜಾಗವಿಲ್ಲ
ಬೀದಿಯಲ್ಲಿ ಹೆಣವಾಗಿದೆ
ಹೆಣ ನದಿಯಲ್ಲಿ ತೇಲಾಡಿದೆ
ನನ್ನ ಕೊಂದು
ನಿನಗೆ ಮೋಕ್ಷ ಸಿಗುವುದಾದರೆ..
ನಿನ್ನ ಧರ್ಮ ಸ್ಥಾಪನೆಯಾಗುವುದಾದರೆ..
ಜಾತಿ ಧರ್ಮ ಪಕ್ಷ ಪಂಗಡದ
ನ್ಯಾಯ ಮುಗಿಯುವುದಾದರೆ…
ಬಾ ನನ್ನ ಕೊಂದು ಬಿಡು…
ನನ್ನ ಶವದ ಮೇಲೆ ನರ್ತನ ಮಾಡಿಬಿಡು…