ಕಡಬ: ಕಡಬದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಭಂಧಿಸಿ ಸಂತ್ರಸ್ತೆ ಯುವತಿಯ ತಂದೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ಥೆಯಾಗಿದ್ದ ಅಪ್ರಾಪ್ತೆ ಯುವತಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ವಿರುದ್ದ ಯುವತಿಯೇ ತಂದೆ ದೂರು ನೀಡಿದ್ದಾರೆ.
ತನ್ನ ಮಗಳನ್ನು ಬಲತ್ಕಾರ ಮಾಡಿ ಅತ್ಯಾಚಾರ ಎಸಗಿ ಇದೀಗ ಗರ್ಭವತಿಯಾಗಲು ಕಾರಣನಾಗಿದ್ದು, ಗರ್ಭಪಾತ ನಡೆಸುವ ಸಲುವಾಗಿ ಯುವತಿಯನ್ನು ಮಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ. ಅಲ್ಲದೆ ಗರ್ಭಪಾತ ನಡೆಸಲು ಹಣವನ್ನು ಕೂಡ ಪೊಲೀಸ್ ಸಿಬ್ಬಂದಿ ಶಿವರಾಜ್ ನೀಡಿದ್ದಾನೆ ಎಂದು ಯುವತಿಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ.
ಏನಿದು ಪ್ರಕರಣ:
ನಾನು ಹಾಗೂ ನನ್ನ ಪತ್ನಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ನನ್ನ ಮಗಳು ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯಾಗಿದ್ದು, ಪ್ರಕರಣ ಆರು ತಿಂಗಳ ಹಿಂದೆ ಮುಗಿದಿದೆ ಅಷ್ಟೆ, ಈ ಪ್ರಕರಣಕ್ಕೆ ಸಂಬಂಧಿಸಿ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ಎಂಬಾತ ಯಾವುದೋ ದಾಖಲೆ, ಸಮನ್ಸ್ ನೀಡುವ ವಿಚಾರಕ್ಕೆ ಮನೆಗೆ ಬರುತ್ತಿದ್ದು ಪರಿಚಯವಾಗಿದ್ದ. ಪ್ರಕರಣ ಮುಗಿದಿದ್ದರೂ ಶಿವರಾಜ್ ಬೇರೆ ಬೇರೆ ನೆಪವೊಡ್ಡಿ ಮನೆಗೆ ಬರುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಇತ್ತಿಚ್ಚೆಗೆ ದೈಹಿಕ ಬೆಳವಣಿಗೆಯಲ್ಲಿ ಏರು ಪೇರಾಗಿ ಮಗಳು ಗರ್ಭೀಣಿ ಆಗಿರುವುದು ತಿಳಿದು ಬಂದು ಮಗಳನ್ನು ವಿಚಾರಿಸಿದಾಗ ಕಡಬ ಪೊಲೀಸ್ ಶಿವರಾಜ್ ಎಂಬಾತ ನನ್ನನ್ನು ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ, ಆದುದರಿಂದ ನನಗೆ ಐದೂವರೆ ತಿಂಗಳು ಆಗಿದೆ ಎಂದು ಸತ್ಯ ಬಾಯಿಬಿಟ್ಟಿದ್ದಳು. ಇದೇ ವೇಳೆ ನಾನು ಶಿವರಾಜ್ ನನ್ನು ಸಂಪರ್ಕ ಮಾಡಿ ನನ್ನ ಮಗಳನ್ನು ಮದುವೆಯಾಗು ಎಂದು ಹೇಳಿದ್ದೆ. ಆ ವೇಳೆ ನಾನು ಮದುವೆಯಾಗುವುದಿಲ್ಲ, ಗರ್ಭೀಣಿ ಆಗಿದ್ದರೆ ಅದನ್ನು ಅಬಾರ್ಷನ್ ಮಾಡಿಸುತ್ತೇನೆ. ಅದಕ್ಕೆ ತಗಲುವ ಖರ್ಚು ಕೊಡುತ್ತೇನೆ ಎಂದು ಹೇಳಿದ.
ಇದಕ್ಕೆ ನಾನು ನೀನು ಖರ್ಚು ಕೊಡುವುದು ಬೇಡ, ಅಬಾರ್ಷನ್ ಮಾಡಿಸುವುದೂ ಬೇಡ ಎಂದು ಹೇಳಿದ್ದೆ. ಈ ಬಳಿಕ ನಾನು ತುಂಬಾ ಅಘಾತಗೊಳಗಾಗಿದ್ದೆ. ಹೀಗಿರುವಾಗ 18-09-2021ರಂದು ನನ್ನ ಹೆಂಡತಿ ಹಾಗೂ ಮಗಳು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಬಂದಿಲ್ಲ. ಪತ್ನಿ ನನಗೆ ಫೋನ್ ಮಾಡುತ್ತಾಳೆ ಆದರೆ ಎಲ್ಲಿದ್ದೆನೆ ಎಂದು ಹೇಳುತ್ತಿಲ್ಲ, ಅಬಾರ್ಷನ್ ಮಾಡಲಾಗಿದೆ, ಅದಕ್ಕೆ 35,000/-ನ್ನು ಶಿವರಾಜ್ ಪೊಲೀಸ್ ಆನ್ಲೈನ್ ಟ್ರಾನ್ಸ್ಪರ್ ಮಾಡಿದ್ದಾನೆಂದೂ, ನಾವು ಒಂದು ಕಡೆ ಇದ್ದೇವೆ, ಎಲ್ಲಿ ಅಂತ ಹೇಳುವುದಿಲ್ಲ ಎಂದು ನನ್ನ ಪತ್ನಿ ಹೇಳುತ್ತಿದ್ದಾಳೆ.
ಆದುದರಿಂದ ಅತ್ಯಾಚಾರ ಎಸಗಿರುವ ಶಿವರಾಜ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ಮತ್ತು ನನ್ನ ಮಗಳು ಹಾಗೂ ಪತ್ನಿ ಶಿವರಾಜ್ ಅವನ ಸುಪರ್ಧಿಯಲ್ಲಿ ಮಂಗಳೂರಿನ ಎಲ್ಲಿಯೋ ಅಜ್ಞಾತ ಸ್ಥಳದಲ್ಲಿರುವ ಅವರನ್ನು ಪತ್ತೆ ಹಚ್ಚಬೇಕು. ಇದಕ್ಕೆಲ್ಲ ಪೊಲೀಸ್ ಪ್ರಭಾವ ಬಳಸಿ ನಮ್ಮನ್ನು ಬೆದರಿಸುತ್ತಿರುವ ಶಿವರಾಜ್ ವಿಚಾರಣೆ ನಡೆಸಿದಾಗ ಎಲ್ಲ ವಿಚಾರ ಬಹಿರಂಗವಾಗಲಿದೆ. ಆದುದರಿಂದ ನನ್ನ ಮಗಳಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ಕೊಡುವಿರಾ ಎಂದು ಅವರು ವಿನಂತಿಸಿದ್ದಾರೆ.
ವಿ.ಹಿ.ಪ ಎಚ್ಚರಿಕೆ:
ಈ ಮಧ್ಯೆ ಆರೋಪಿಯನ್ನು ಅಮಾನತುಗೊಳಿಸಿ, ಕ್ರಮ ಕೈಗೊಳ್ಳದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಭಾಸ್ಕರ ಧರ್ಮಸ್ಥಳ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ , ಕಾರ್ಯದರ್ಶಿ ಪ್ರಮೋದ್ ರೈ ಅವರುಗಳು ಎಚ್ಚರಿಸಿದ್ದಾರೆ.