ಪಾಟ್ನಾ: ಜಗತ್ತು ಎಷ್ಟೇ ಬದಲಾಗಿದ್ದರೂ, ಆಧುನಿಕತೆಗೆ ನಮ್ಮನ್ನು ನಾವು ತೆರೆದುಕೊಂಡಿದ್ದರೂ ಕೆಲವರ ಮನಸ್ಥಿತಿಯಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ. ಮತ್ತೊಂದು ಮಗುವಿಗೆ ಜನ್ಮ ನೀಡುವ ಸಂಭ್ರಮದಲ್ಲಿದ್ದ ಗರ್ಭಿಣಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಆಘಾತ ಮತ್ತು ನೋವಿನಿಂದ ಪ್ರಜ್ಞಾಹೀನಳಾದ ಆಕೆಯನ್ನು ರೈಲ್ವೆ ಹಳಿಯ ಮೇಲೆ ಬಿಸಾಡಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಈ ಹೀನ ಕೃತ್ಯ ನಡೆದಿದೆ.ಪಾಟ್ನಾದ 24 ವರ್ಷದ ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಬಳಿಕ ಪಾಟ್ನಾದ ರೈಲ್ವೆ ಜಂಕ್ಷನ್ ಬಳಿ ರೈಲ್ವೆ ಹಳಿಯ ಮೇಲೆ ಆಕೆಯನ್ನು ಎಸೆದು ಕಾಮುಕರು ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ. ಮೂವರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಗರ್ಭಿಣಿ ವಾಕಿಂಗ್ ಹೋಗಿದ್ದಾಗ ಅದೇ ಏರಿಯಾದ ಇಬ್ಬರು ಯುವಕರು ಆಕೆಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದರು. ಆಗ ಆಕೆ ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ ಅವರಿಬ್ಬರು ಆಕೆಯ ಬಾಯಿಯನ್ನು ಮುಚ್ಚಿ, ಹತ್ತಿರದಲ್ಲಿದ್ದ ಮೈದಾನಕ್ಕೆ ಎಳೆದುಕೊಂಡು ಹೋದರು. ಅಲ್ಲಿ ಇನ್ನೊಬ್ಬನಿಗೆ ಫೋನ್ ಮಾಡಿದ ಅವರು ಆತನನ್ನು ಕೂಡ ಅಲ್ಲಿಗೆ ಬರಲು ಹೇಳಿದರು. ಬಳಿಕ ಮೂವರೂ ಸೇರಿ ಆ ಗರ್ಭಿಣಿಯ ಮೇಲೆ ಒಬ್ಬರಾರ ಬಳಿಕ ಒಬ್ಬರು ಅತ್ಯಾಚಾರ ನಡೆಸಿದ್ದಾರೆ.ಆ ಗರ್ಭಿಣಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಮೂರನೇ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಹಿಳೆಯ ಗರ್ಭದಲ್ಲಿರುವ ಮಗುವಿನ ಆರೋಗ್ಯ ಹೇಗಿದೆ ಎಂಬ ಬಗ್ಗೆ ವೈದ್ಯರು ಇನ್ನೂ ಏನೂ ಹೇಳಿಲ್ಲ.