ಚಿಕ್ಕಮಗಳೂರು: ಹುಟ್ಟಿದಾಗಿನಿಂದ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಯುವತಿ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.ಶಾಲಾ-ಕಾಲೇಜಿಗೆ ಹೋಗದೆ, ಮನೆಯಲ್ಲೇ ಓದಿ ದೀಪಿಕಾ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪಾಸ್ ಮಾಡಿದ್ದಾಳೆ.
ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಕಾಯಿಲೆಯಿಂದ ಈಕೆ ಬಳಲುತ್ತಿದ್ದಾಳೆ. ಶಾಲಾ-ಕಾಲೇಜು ಸೇರಿದಂತೆ ಮನೆಯಿಂದ ಹೊರ ಹೋಗುವಂತಿಲ್ಲ. ಈಕೆಯದ್ದು ಮನೆಯೊಳಗಿನ ಜೀವನ. ಆದರೂ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಸುಧಾಕರ್-ಪ್ರತಿಮಾ ದಂಪತಿಯ ಪುತ್ರಿ ದೀಪಕಾ ಮೊದಲ ಸಲವೇ ಪಿಯುಸಿ ಪಾಸ್ ಮಾಡಿ ಮಾದರಿಯಾಗಿದ್ದಾಳೆ.
ಈಕೆ ಹುಟ್ಟಿದಾಗಿನಿಂದ ಯಾವುದೇ ಶಾಲಾ-ಕಾಲೇಜಿಗೆ ಹೋಗಿಲ್ಲ. ಯಾವ ಶಿಕ್ಷಕರ ಪಾಠವನ್ನೂ ಕೇಳಿಲ್ಲ. ಯಾವ ಟ್ಯೂಷನ್‍ಗೂ ಹೋಗಿಲ್ಲ. ತಾನೇ ಓದಿ, ತನ್ನ ಗ್ರಹಿಕಾ ಶಕ್ತಿಯಿಂದ ಮೊದಲ ಸಲ ಪರೀಕ್ಷೆ ಎದುರಿಸಿ ಪಿಯುಸಿ ಪಾಸ್ ಮಾಡಿದ್ದಾಳೆ. ಕಳೆದ ಎರಡು ವರ್ಷದ ಹಿಂದೆ ಸರ್ಕಾರ ಖಾಸಗಿಯಾಗಿ ನಡೆಸಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನೂ ಕೂಡ ಪಾಸ್ ಮಾಡಿದ್ದಳು. ಓದಿನ ಜೊತೆಗೆ ಚಿತ್ರಕಲೆ, ಎಂಬ್ರಾಯ್ಡಿಂಗ್, ಕಂಪ್ಯೂಟರ್, ಟೈಲರಿಂಗ್ ಕೂಡ ಮಾಡಿದ್ದಾಳೆ.ತನ್ನಂತೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ತನ್ನ ತಂಗಿಗೂ ತಾನೇ ಪಾಠ ಮಾಡುತ್ತಿದ್ದಾಳೆ.
ಹೆತ್ತವರು ಕೂಡ ಕಳೆದ 20 ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಕ್ಕಳನ್ನು ಯಾವುದೇ ಕೀಳಿರಿಮೆ ಬಾರದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳುತ್ತಿದ್ದಾರೆ. ಓದಿ ದೊಡ್ಡವಳಾಗಿ ತನ್ನಂತೆ ಅಪರೂಪದ ಕಾಯಿಲೆಯಿಂದ ಬಳಲುವವರ ಸೇವೆ ಮಾಡಬೇಕೆಂಬ ಆಸೆ ದೀಪಿಕಾಳದ್ದಾಗಿದೆ. ಹೆತ್ತವರು ಕೂಡ ಮಗಳಿಗೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಅವಳ ಜೀವನಕ್ಕೂ ಸಹಕಾರಿಯಾಗಲಿದೆ. ಜೊತೆಗೆ ನಮಗೂ ತುಸು ನೆಮ್ಮದಿ ಸಿಗಲಿದೆ ಎಂದಿದ್ದಾರೆ.