ವಿಟ್ಲ, ಸೆ.30: ಕಾರಿನಲ್ಲಿ ಬಂದು ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ವಿಟ್ಲ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬರಂಗೋಡಿ ನಿವಾಸಿ ರಾಜೀವ ಬಿ ಎಂಬವರು ಸೆ 19 ರಂದು ಹಲ್ಲೆ ಹಾಗೂ ಜೀವ ಬೆದರಿಕೆ ಒಡ್ಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಕುದ್ದುಪದವು ನಿವಾಸಿ ಎಂ. ಕೃಷ್ಣ (37), ಉಕ್ಕುಡ ದರ್ಬೆ ನಿವಾಸಿ ಕೇಶವ ಬಂಗೇರ (54), ಬಾಯಾರು ನಿವಾಸಿ ಅಶೋಕ್ ಕುಮಾರ್ ಟಿ. (೩37), ಕಾಸರಗೋಡು ನಿವಾಸಿ ಚಂದ್ರಶೇಖರ ಸಿ (37) ಎಂಬವರನ್ನು ಬಂಧಿಸಲಾಗಿದೆಸೆ.19 ರಂದು ರಾಜೀವಿ ಅವರ ಪೋನಿಗೆ ಯಾರೋ ಅಪರಿಚಿತರು ಕರೆ ಮಾಡಿ ಬರಂಗೋಡಿ ತರವಾಡು ಮನೆಯ ವಿಚಾರವನ್ನು ಮಾತನಾಡಲು ಹಾಗೂ ಜಾಗವನ್ನು ನೋಡಲು ಬರುತ್ತೇವೆ ಎಂದು ತಿಳಿಸಿದ್ದರು.
ಅಲ್ಲದೇ ನಮಗೆ ಅಲ್ಲಿಗೆ ಬರಲು ದಾರಿ ಗೊತ್ತಿಲ್ಲ, ದಾರಿ ತೋರಿಸಲು ರಸ್ತೆಗೆ ಬನ್ನಿ ಎಂದು ಹೇಳಿದ್ದರು. ರಾಜೀವಿಯವರು ದಾರಿ ತೋರಿಸುವ ಉದ್ದೇಶದಿಂದ ಅಳಿಕೆ ಗ್ರಾಮದ ಶಾರದಾ ವಿಹಾರ ಬೈರಿಕಟ್ಟೆ ರಸ್ತೆ ಬರಂಗೋಡಿ ಎಂಬಲ್ಲಿಗೆ ಬಂದಾಗ ಅಲ್ಲೆ ಹತ್ತಿರದ ತಿರುವಿನಲ್ಲಿ ನಿಂತಿದ್ದ ಓಮ್ನಿ ಕಾರಿನಿಂದ ಇಬ್ಬರೂ ಅಪರಿಚಿತರು ಇಳಿದು ಬಂದು ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ಆ ವೇಳೆ ಆ ರಸ್ತೆಯಲ್ಲಿ ಬೈಕ್ ಬಂದದನ್ನು ಗಮನಿಸಿದ ಆರೋಪಿಗಳು ತಾವು ಬಂದ ಒಮ್ನಿಯಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 124/2021ರಂತೆ 323,504,506 ಐಪಿಸಿಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವೈಜ್ಞಾನಿಕ ತನಿಖೆಯ ಮೂಲಕ ವಿಟ್ಲ ಠಾಣೆ ಪೊಲೀಸರು ಆರೋಪಿಗಳನ್ನು ಬಂದಿಸಿದ್ದಾರೆ.