ಹುಬ್ಬಳ್ಳಿ : ಎಲ್ಲಾ ಮಸೀದಿಗಳಲ್ಲಿ ಶಬ್ದ ಮಾಲಿನ್ಯವಾಗುತ್ತಿದ್ದು , ಮೈಕ್ ನೀವು ತೆಗೆಯುತ್ತೀರೋ ಅಥವಾ ನಾವು ತೆಗೆಯಬೇಕೋ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಶಬ್ದ ಮಾಲಿನ್ಯ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ಹೊರಡಿಸಿ 21 ವರ್ಷ ಕಳೆದಿದ್ದು ,ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ ಶಬ್ದ ಮಾಲಿನ್ಯ ಆಗಬಾರದು ಎಂಬ ಆದೇಶವಿದ್ದು ಜನಪ್ರತಿನಿಧಿಗಳು ಹಾಗೂ ಪೊಲೀಸರ ನಿರ್ಲಕ್ಷ್ಯದಿಂದಾಗಿ ಶಬ್ದಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ
ಇನ್ನು ಆಸ್ಪತ್ರೆ, ದೇವಾಲಯ, ಮಸೀದಿ, ಚರ್ಚ್ ಹೀಗೆ ಅನೇಕ ಪ್ರದೇಶಗಳನ್ನ ನಿಶಬ್ದ ವಲಯಗಳು ಎಂದು ಘೋಷಿಸಲಾಗಿದೆ. ಪ್ರಾರ್ಥನೆ, ಭಜನೆ ಈ ಬಗ್ಗೆ ನಮಗೆ ಯಾವುದೇ ಆಕ್ಷೇಪ ಇಲ್ಲ. ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಶಬ್ದಮಾಲಿನ್ಯದ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ. ಸುಪ್ರೀಂಕೋರ್ಟ್‍ನ ಆದೇಶವಿದ್ದರೂ ಅದನ್ನ ಉಲ್ಲಂಘಿಸಲಾಗುತ್ತಿದೆ. ದಿನಕ್ಕೆ ಐದು ಬಾರಿ ಮಸೀದಿಗಳಲ್ಲಿ ಮೈಕ್ ಬಳಕೆ ಮಾಡುವ ಮೂಲಕ ಕಿರಿಕಿರಿ ಉಂಟು ಮಾಡಲಾಗುತ್ತಿದೆ.
ಶಬ್ದಮಾಲಿನ್ಯದ ಬಗ್ಗೆ ಅನೇಕ ಜನ ಗಣ್ಯಮಾನ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಆದೇಶ ಜಾರಿ ಮಾಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮಸೀದಿ ಮುಂದೆಯೇ ನಾವು ಉಗ್ರ ಹೋರಾಟ ನಡೆಸುತ್ತೇವೆ. ಪೊಲೀಸ್ ಮಾಡಬೇಕಿರುವ ಕೆಲಸವನ್ನ ನಾವು ಮಾಡಲು ಸಿದ್ದರಿದ್ದೇವೆ ಎಂದಿದ್ದಾರೆ
ಮುಸ್ಲಿಂ ಸಮಾಜದ ಅನೇಕರೂ ಸಹ ಶಬ್ದ ಮಾಲಿನ್ಯದ ಬಗ್ಗೆ ಆಕ್ಷೇಪ ಮಾಡಿದ್ದಾರೆ. ಸರ್ಕಾರ ಮುಸ್ಲಿಂ ಸಮಾಜದವರ ಜೊತೆ ಮಾತನಾಡಿ ನಮಾಜ್ ಮೈಕ್ ನಿಲ್ಲಿಸಬೇಕು. ಜಗತ್ತಿನ 16 ದೇಶಗಳಲ್ಲಿ ಈ ಶಬ್ದ ಮಾಲಿನ್ಯಕ್ಕೆ ತಡೆ ಇದೆ. ಎಲ್ಲ ದೇಶಗಳಲ್ಲಿಯೂ ಮಸೀದಿಗಳ ಮೇಲೆ ಮೈಕ್ ಬಳಸುವುದಿಲ್ಲ. ಆದ್ರೆ ರಾಜ್ಯ ಸರ್ಕಾರ ಮುಸ್ಲಿಂ ಸಮಾಜದ ಮಾನಸಿಕತೆಯನ್ನ ಪ್ರಬಲಗೊಳಿಸುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು. ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.