ಲಖನೌ: ಪ್ರಾಥಮಿಕ ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಬಿಸಿಯೂಟಕ್ಕೆ ದಲಿತ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿದ ಘಟನೆ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ವನಪುರ್ವಾ ಗಡೇರಿ ಗ್ರಾಮ ಪಂಚಾಯಿತಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಈ ಶಾಲೆಯ ಮುಖ್ಯ ಶಿಕ್ಷಕ ಕುಸುಮ್ ಸೋನಿ, ಮಧ್ಯಾಹ್ನದ ಊಟದ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಸರತಿ ಸಾಲಿನಲ್ಲಿ ಕೂರಿಸಿದ್ದರು. ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆ ಕುರಿತು ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕುಸಮ್ ಸೋನಿಯನ್ನು ಅಮಾನತು ಮಾಡಲಾಗಿದೆ.“ಶಿಕ್ಷಕ ಕುಸುಮ್ ಸೋನಿ ಊಟಕ್ಕೆ ಮೇಲ್ಜಾತಿ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸರತಿ ಸಾಲುಗಳನ್ನು ಮಾಡಿದ್ದರು”ಎಂದು ದಲಿತ ಸಮುದಾಯಕ್ಕೆ ಸೇರಿದ ಪೋಷಕರಲ್ಲಿ ಒಬ್ಬರಾದ ನಾರಾಯಣ್ ಅವರು ಆರೋಪಿಸಿದ್ದಾರೆ.
ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿರುವ ಸೋನಿ, “ನಾನು ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ. ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟಿಗೆ ಕೂರಿಸಲಾಗಿದೆ. ತಾನು ಹಳ್ಳಿಯ ಮುಖ್ಯಸ್ಥನ ಪ್ರತಿನಿಧಿ ಎಂದು ಹೇಳಿಕೊಂಡ ಪವನ್ ದುಬೆ ಎಂಬ ವ್ಯಕ್ತಿ ಇಲ್ಲಿಗೆ ಬಂದು, ಎಲ್ಲರನ್ನು ಹೊರಗೆ ತಳ್ಳಿ, ಗೇಟ್‌ಗಳನ್ನು ಲಾಕ್ ಮಾಡಿ, ಶಾಲೆಯ ಚಿತ್ರಗಳನ್ನು ಕ್ಲಿಕ್ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ನಾನು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಸೋನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.