ಲಖನೌ: ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಸರ್ಕಾರದ ನಡುವೆ ಸೋಮವಾರ ಒಪ್ಪಂದ ಏರ್ಪಟ್ಟಿದೆ. ನಾಲ್ವರು ರೈತರು ಸೇರಿ ಎಂಟು ಮಂದಿಯ ಸಾವಿಗೆ ಕಾರಣವಾದ ಪ್ರಕರಣದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆ.
ಮೃತರ ಕುಟುಂಬಕ್ಕೆ ತಲಾ ₹45 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹10 ಲಕ್ಷ ಪರಿಹಾರ ನೀಡಲು ಒಪ್ಪಿದೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ, ನಾಲ್ವರು ರೈತರ ಮೇಲೆ ಎಸ್‌ಯುವಿ ಹರಿಸಿದ ಆರೋಪ ಹೊತ್ತಿರುವ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣದ ದಾಖಲಿಸಲಾಗಿದೆ.
ಮೃತ ರೈತರ ಅಂತ್ಯ ಸಂಸ್ಕಾರಕ್ಕೆ ರೈತ ನಾಯಕರು ಒಪ್ಪಿದ್ದಾರೆ, ಜತೆಗೆ ಅವರು ಪ್ರತಿಭಟನೆಯನ್ನೂ ಕೊನೆಗೊಳಿಸಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಲಖಿಂಪುರ–ಖೇರಿಯಲ್ಲಿ ಸೋಮವಾರ ಪ್ರಕಟಿಸಿದರು.
ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಜತೆಗೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅವರ ಅರ್ಹತೆಗೆ ಅನುಸಾರವಾದ ಉದ್ಯೋಗ ನೀಡಲಾಗುವುದು ಮತ್ತು ಆರೋಪಿಗಳನ್ನು ಎಂಟು ದಿನಗಳ ಒಳಗೆ ಬಂಧಿಸಲಾಗುವುದು ಎಂದು ಅವರು ಹೇಳಿದರು.
ಹಿಂಸಾಚಾರ ನಡೆದ ತಿಕೋನಿಯ ಪಟ್ಟಣದಲ್ಲಿ ಭದ್ರತೆ ಮತ್ತು ಗಸ್ತು ಹೆಚ್ಚಿಸಲಾಗಿದೆ. ಜಿಲ್ಲೆಯ ಬೇರೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಭಾನುವಾರದ ಘಟನೆಗೆ ಸಂಬಂಧಿಸಿ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪ್ರಶಾಂತ್ ಕುಮಾರ್ ಮಾಹಿತಿ ನೀಡಿದರು.
ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಅವರನ್ನು ತಡೆಯಲು ನೂರಾರು ರೈತರು ಭಾನುವಾರ ಯತ್ನಿಸಿದ್ದರು. ಈ ಗುಂಪಿನ ಮೇಲೆ ಮಿಶ್ರಾ
ಅವರಿಗೆ ಸಂಬಂಧಿಸಿದ ಎಸ್‌ಯುವಿ ಹರಿದು ನಾಲ್ವರು ರೈತರು ಮೃತಪಟ್ಟರು. ನಂತರ ನಡೆದ ಹಿಂಸಾಚಾರಕ್ಕೆ ನಾಲ್ವರು ಬಲಿಯಾದರು. ರೈತರ ಮೇಲೆ ಹರಿದ ಕಾರನ್ನು ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಚಾಲನೆ ಮಾಡಿದ್ದರು ಎಂದು ರೈತರು ಆರೋಪಿಸಿದ್ದಾರೆ.