ಹೈದರಾಬಾದ್: ಮೊಬೈಲ್‍ನಲ್ಲಿ ಗೇಮ್ ಆಡಬೇಡ ಎಂದು ತಂದೆ ಗದರಿದ್ದಕ್ಕೆ ಮನನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶಾರಣಾಗಿರುವ ಘಟನೆ ತೆಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೌಶಿಕಿ (17) ಮೃತಳಾಗಿದ್ದಾಳೆ.
ಈಕೆ ಬಾಳಾಪುರ್ ಮೂಲದ ವೇಲದುರ್ತಿ ಮನೋಹರಚಾರಿ ಮತ್ತು ಕಲ್ಯಾಣ ದಂಪತಿ ಮಗಳಾಗಿದ್ದಾಳೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಈ ಕುಟುಂಬ ಮೀರ್‌ಪೇಟ್ ನ ಸರ್ವೋದಯ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸವಾಗಿದ್ದರು.ಕೌಶಿಕಿ ದ್ವೀತಿಯ ಪಿಯು ವಿದ್ಯಾರ್ಥಿನಿ ಆಗಿದ್ದಳು.
ಮೊಬೈಲ್ ಗೀಳಿಗೆ ಬಿದ್ದಿದ್ದ ಕೌಶಿಕಿ ಅಪ್ಪನ ಮೊಬೈಲ್ ತೆಗೆದುಕೊಂಡು ಪ್ರತಿದಿನ ಗೇಮ್ ಆಡುತ್ತಿದ್ದಳು. ಗೇಮ್ ಆಡುತ್ತಿರುವಾಗ ಒಂದು ದಿನ ರಾತ್ರಿ ಕೌಶಿಕಿ ತಂದೆ ಆಕೆಯನ್ನು ಬೈದು ಮೊಬೈಲ್ ಕಿತ್ತುಕೊಂಡಿದ್ದರು. ಅಪ್ಪ ಬೈದಿದ್ದರಿಂದ ಬೇಸರಗೊಂಡಿದ್ದ ಕೌಶಿಕಿ ಅದೇ ದಿನ ರಾತ್ರಿ ಮಲಗುವುದಾಗಿ ಹೇಳಿ ಬೆಡ್‍ರೂಮ್‍ಗೆ ಹೋಗಿ ಲಾಕ್ ಮಾಡಿಕೊಂಡಿದ್ದಳು.
ಅದೇ ಕೋಣೆಯಲ್ಲಿ ಆಕೆಯ ಸಹೋದರಿ ಕೂಡಾ ಮಲಗಿದ್ದಳು. ಆದರೆ ಈ ನಡುವೆ ತಾಯಿ ಕಿಟಕಿ ಬಾಗಿಲು ತಟ್ಟಿದ್ದಾರೆ. ಕೌಶಿಕಿ ಸಹೋದರಿ ಎಚ್ಚರಗೊಂಡು ನೋಡಿದಾಗ ಅಕ್ಕ ದುಪ್ಪಟ್ಟಿದಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಜೋರಾಗಿ ಕಿರುಚಿದ್ದಾಳೆ.
ತಕ್ಷಣ ಕೌಶಿಕಿಯನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೌಶಿಕಿ ಸಾವನ್ನಪ್ಪಿದ್ದಾಳೆ. ಸದಯ ಈ ಪ್ರಕರಣ ಮೀರ್‍ಪೇಟ್ ಠಾಣೆಯಲ್ಲಿ ದಾಖಲಾಗಿದೆ.