ಪುತ್ತೂರು, ಅ 6: ಮನೆ ಸಮೀಪದ ತೋಟದಲ್ಲಿ ಸಿಕ್ಕಿದ ಅಣಬೆಯನ್ನು ಪದಾರ್ಥ ಮಾಡಿ ಸೇವಿಸಿ, ಒಂದೇ ಕುಟುಂಬದ 10 ಮದಿ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದ ಘಟನೆ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ಅ.6ರಂದು ನಡೆದಿದೆ.
10 ಮಂದಿಯ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿರುವ ಹಿನ್ನಲೆಯಲ್ಲಿ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಪಡ್ನೂರು ಕೊಡಂಗೆ ಸಾಂತಪ್ಪರವರ ಪುತ್ರ ರಾಘವ ರವರ ಮನೆಯಲ್ಲಿ ಅಣಬೆ ಪದಾರ್ಥ ಮಾಡಲಾಗಿತ್ತು. ಇದನ್ನು ಸೇವಿಸಿದ ರಾಘವ, ಅವರ ತಾಯಿ ಹೊನ್ನಮ್ಮ, ಪತ್ನಿ ಲತಾ, ಪುತ್ರಿ ತೃಷಾ, ಸಹೋದರಿ ಬೇಬಿ, ಬಾವಂದಿರಾದ ದೇವಪ್ಪ, ಕೇಶವ, ರಾಘವರವರ ಸಹೋದರಿಯರ ಮಕ್ಕಳಾದ ಸುದೇಶ್, ಧನುಷ್ ಹಾಗೂ ಅರ್ಚನಾರವರು ಆರೋಗ್ಯ ಹದಗೆಟ್ಟು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾದವರ ಪೈಕಿ ಹೊನ್ನಮ್ಮ ಹಾಗೂ ಇನ್ನೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಿನ್ನೆ ಕೂಡ ತೋಟದಲ್ಲಿ ಅಣಬೆ ಸಿಕ್ಕಿದ್ದು ಅದನ್ನು ತಂದು ಪದಾರ್ಥ ಮಾಡಿ ಮನೆ ಮಂದಿ ಸೇವಿಸಿದ್ದರು.
ಇಂದು ಮತ್ತೆ ಅಣಬೆ ಸಿಕ್ಕಿದ್ದು ಅದನ್ನು ಕೂಡ ಮನೆಗೆ ತಂದು ಪದಾರ್ಥ ಮಾಡಿದ್ದಾರೆ . ಆದರೇ ಇಂದು ಊಟ ಸೇವಿಸಿದ ಕೆಲ ಸಮಯದಲ್ಲಿ ಎಲ್ಲರ ಆರೋಗ್ಯದಲ್ಲೂ ವ್ಯತ್ಯಾಸ ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ಪಡೆದ ಪುತ್ತೂರು ಶಾಸಕ ಸಂಜೀವ ಮಠoದೂರುರವರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.