ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ42 ರನ್ ಅಂತರದ ಗೆಲುವು ದಾಖಲಿಸಿದರೂ ಮುಂಬೈ ಇಂಡಿಯನ್ಸ್ ತಂಡವು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿದೆ.
ಇದರೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ಕನಸು ಭಗ್ನಗೊಂಡಿದೆ. ಅತ್ತ ಕೋಲ್ಕತ್ತ ನೈಟ್ ರೈಡರ್ಸ್ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ.
ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲು ಈ ಪಂದ್ಯದಲ್ಲಿ ಮುಂಬೈ 170ಕ್ಕೂ ಹೆಚ್ಚು ರನ್‌ಗಳ ಗೆಲುವು ದಾಖಲಿಸಬೇಕಿತ್ತು. ಇದಕ್ಕೆ ತಕ್ಕಂತೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಇಶಾನ್ ಕಿಶನ್ (84) ಹಾಗೂ ಸೂರ್ಯಕುಮಾರ್ ಯಾದವ್ (82) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 235 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇಶಾನ್ 32 ಎಸೆತಗಳಲ್ಲಿ 84 ರನ್ ಹಾಗೂ ಸೂರ್ಯಕುಮಾರ್ 40 ಎಸೆತಗಳಲ್ಲಿ 82 ರನ್ ಗಳಿಸಿದರು.
ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಎಂಟು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಸಮರ್ಥವಾಯಿತು.