ರುತುರಾಜ್- ಉತ್ತಪ್ಪ ಬಿರುಸಿನ ಆಟ; ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಚೆನ್ನೈ ಕಿಂಗ್ಸ್
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಋತುರಾಜ್ ಗಾಯಕವಾಡ್ (70) ಹಾಗೂ ರಾಬಿನ್ ಉತ್ತಪ್ಪ (63) ಆಕರ್ಷಕ ಅರ್ಧಶತಕ ಸಾಧನೆಯ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 18 ರನ್ ಗಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ (60), ನಾಯಕ ರಿಷಭ್ ಪಂತ್ (51*) ಹಾಗೂ ಶಿಮ್ರೊನ್ ಹೆಟ್ಮೆಯರ್ (37) ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 172 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪೃಥ್ವಿ 27 ಹಾಗೂ ಪಂತ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದರು.
ಆದರೆ ಚೆನ್ನೈ ತಂಡಕ್ಕೆ ಶತಕದ ಜೊತೆಯಾಟ ಕಟ್ಟಿದ ಗಾಯಕವಾಡ್ ಹಾಗೂ ಉತ್ತಪ್ಪ ಭದ್ರ ಅಡಿಪಾಯ ಹಾಕಿಕೊಟ್ಟರು. ಕೊನೆಯ ಹಂತದಲ್ಲಿ ತಮ್ಮ ನೈಜ ಆಟ ಪ್ರದರ್ಶಿಸಿದ ಧೋನಿ ನೆರವಿನಿಂದ ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ಅಂತರದಲ್ಲಿ ಗೆಲುವು ದಾಖಲಿಸಿತು.