ಶಾರ್ಜಾ: ಸುನಿಲ್ ನಾರಾಯಣ್ ಆಲ್‌ರೌಂಡರ್ ಆಟದ (4 ವಿಕೆಟ್ ಹಾಗೂ 26 ರನ್) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್‌ನಲ್ಲಿ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಐಪಿಎಲ್‌ನಲ್ಲಿ ಆರ್‌ಸಿಬಿಯ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. ಕೊನೆಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲುವ ಆಸೆಯೂ ಈಡೇರಲಿಲ್ಲ.
ಈ ಹಿಂದೆಯೇ ಪ್ರಸಕ್ತ ಸಾಲಿನ ಬಳಿಕ ಆರ್‌ಸಿಬಿ ನಾಯಕತ್ವ ತೊರೆಯುವುದಾಗಿ ಕೊಹ್ಲಿ ಘೋಷಿಸಿದ್ದರು. ಇದರೊಂದಿಗೆ ಕೊಹ್ಲಿ ಮುನ್ನಡೆಸಿದ ಕೊನೆಯ ಪಂದ್ಯದಲ್ಲಿ ಸೋಲು ಎದುರಾಗುವುದರೊಂದಿಗೆ ಕಪ್ ಗೆಲ್ಲುವ ಕನಸು ಕಮರಿದೆ.
ಅತ್ತ ಎರಡು ಬಾರಿಯ ಚಾಂಪಿಯನ್ ಕೆಕೆಆರ್, ಬುಧವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲನ್ನು ಎದುರಿಸಲಿದೆ. ಅಲ್ಲಿ ಗೆದ್ದ ತಂಡವು ಶುಕ್ರವಾರದಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿವೆ.
ಮೊದಲು ಸುನಿಲ್ ನಾರಾಯಣ್ (21ಕ್ಕೆ 4 ವಿಕೆಟ್) ಸ್ಪಿನ್ ಮೋಡಿಗೆ ತತ್ತರಿಸಿದ ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 138 ರನ್ ಗಳಿಸಲಷ್ಟೇ ಸಮರ್ಥವಾಯಿತು. ವಿರಾಟ್ ಕೊಹ್ಲಿ (39), ಎಬಿ ಡಿವಿಲಿಯರ್ಸ್ (11), ಗ್ಲೆನ್ ಮ್ಯಾಕ್ಸ್‌ವೆಲ್ (15) ಹಾಗೂ ಶ್ರೀಕರ್ ಭರತ್ (9) ವಿಕೆಟ್‌ಗಳನ್ನು ಕಬಳಿಸಿದ ನಾರಾಯಣ್ ಆರ್‌ಸಿಬಿ ಓಟಕ್ಕೆ ಕಡಿವಾಣ ಹಾಕಿದರು.
ಬಳಿಕ ಒಂದು ಹಂತದಲ್ಲಿ ಕೆಕೆಆರ್ 11 ಓವರ್‌ಗಳಲ್ಲಿ 79 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ನಾರಾಯಣ್, ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೆಕೆಆರ್ ಗೆಲುವಿನ ರೂವಾರಿ ಎನಿಸಿದರು. ಡೇನಿಯಲ್ ಕ್ರಿಸ್ಟಿಯನ್ ಎಸೆದ ಇನ್ನಿಂಗ್ಸ್‌ನ 12 ಓವರ್‌ನಲ್ಲಿ ನಾರಾಯಣ್ ಮೂರು ಸಿಕ್ಸರ್ ಸೇರಿದಂತೆ ಒಟ್ಟು 22 ರನ್ ಸೊರೆಗೈದರು. ಇಲ್ಲಿಂದ ಬಳಿಕ ಪಂದ್ಯ ಆರ್‌ಸಿಬಿ ಹಿಡಿತದಿಂದ ಜಾರಿತು.
ಅಂತಿಮವಾಗಿ ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಕೆಕೆಆರ್ ಆರು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.