dtvkannada

ಎಲ್ಲಿ ಕಂಡರೂ ಮುಗುಳ್ನಗುತ್ತಾ ಮಾತಿಗಿಳಿಯುತ್ತಿದ್ದ ಅಝೀಝ್ ಎಂದಿನಂತೆ ತನ್ನ ಅಂಗಡಿಗೆ ಮನೆಯಿಂದ ಹೊರಟು ಇನ್ನೇನು ಐನೂರು ಮೀಟರ್ ನಷ್ಟು ದೂರ ಕ್ರಮಿಸುವ ಮುನ್ನವೇ ವಿಧಿಯ ಕರೆಗೆ ಓಗೊಟ್ಟು ಈ ಲೋಕಕ್ಕೆ ಯಾತ್ರೆಯಾಗಿ ಮೂರು ದಿವಸಗಳು ಕಳೆದಿತ್ತಷ್ಟೇ.
ಜನರ ಮನದಲ್ಲಿ ಆ ಭೀಕರತೆಯ ನೋವು ಮರೆಯಾಗಿರಲಿಲ್ಲ.
ಎರಡು ಪುಟ್ಟ ಕಂದಮ್ಮಗಳನ್ನು ತಬ್ಬಲಿಗಳನ್ನಾಗಿಸಿ ಯಾತ್ರೆಯಾದ ಅಝೀಝ್ ನ ಕುರಿತು ಎಲ್ಲರ ಬಾಯಲ್ಲೂ ಒಳ್ಳೆಯದನ್ನೇ ಆಗಿತ್ತು ಕೇಳಿಸಿಕೊಳ್ಳಲು ಸಾಧ್ಯವಾದದ್ದು.
ಪುತ್ತೂರಿನ ಶವಾಗಾರದ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅದೆಷ್ಟೋ ಸ್ನೇಹಿತರ ಪಾಲಿಗೆ ಅಝೀಝ್ ಇಂದು ನೆನಪು ಮಾತ್ರ!.
ಅಝೀಝ್ ನ ಕುರಿತು ಮಾತನಾಡುತ್ತಾ ಸಹೋದರ ಧರ್ಮೀಯನಾದ ಅಶೋಕ್ ರಾವ್ ರವರು ಹೇಳುತ್ತಾರೆ ಆಝೀಝ್ ಮಾತನಾಡುವ ಮುನ್ನ ಯೋಚಿಸುವವನಾಗಿದ್ದ.
ಒಂದು ಕಾಲು ಮುಂದೆ ಇಡುವಾಗಲೂ ಇನ್ನೊಂದು ಜೀವಿಗೆ ನೋವಾಗದಿರಲಿ ಎಂದು ಜಾಗೃತೆ ಪಾಲಿಸುತ್ತಿದ್ದ. ಅಷ್ಟೊಂದು ಸೂಕ್ಷ್ಮತೆಯಲ್ಲಿ ಜೀವಿಸುವವರನ್ನು ನಾನು ಕಂಡೇ ಇಲ್ಲ ಎಂದು.
ಎಲ್ಲರೂ ಆತನ ಗುಣಗಾನ ಮಾಡುತ್ತಿದ್ದರು.
ಆದರೆ ವಿಧಿಯ ಬರಹ ಮಾತ್ರ ಬೇರೆಯಾಗಿತ್ತು.
ಆ ನೋವು ಮಾಸುವ ಮುನ್ನವೇ ತನ್ನ ಮಗುವಿಗೆ ಔಷಧಿಗಾಗಿ ಉಪ್ಪಿನಂಗಡಿಗೆ ಬಂದ ತಾಯಿ ಮಗು ಬಸ್ ಚಾಲಕನ ಅಜಾಗರೂಕತೆಯ ಚಾಲನೆಗೆ ಬಲಿಯಾದ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಯಿತು.
ಪುತ್ತೂರಿನ ಶವಾಗಾರದಲ್ಲಿ ಆ ತಾಯಿ ಮತ್ತು ಮಗುವಿನ ಜನಾಝವನ್ನು ಮಲಗಿಸಲಾಗಿತ್ತು.
ಏನೂ ಅರಿಯದ ಮುದ್ದು ಕಂದಮ್ಮನನ್ನು ನೋಡಿ ಹಲವರ ಕಣ್ಣುಗಳು ಒದ್ದೆಯಾಗಿತ್ತು.
ತಾನು ಕೆಲಸಕ್ಕೆ ಹೋಗುವಾಗಲೂ ಮಗುವಿನೊಂದಿಗೆ ಆಟವಾಡಿ ಹೋದ ಮಾವನ ಆರ್ತನಾದ ಎಂತಹ ಕಲ್ಲು ಹೃದಯಗಳನ್ನೂ ಕರಗಿಸುವಂತಿತ್ತು.
ತನ್ನವರನ್ನು ಕಳೆದುಕೊಂಡ ಜೀವಕ್ಕೆ ಸಾಂತ್ವನ ಹೇಳುವುದಾದರೂ ಹೇಗೆ ತಾನೇ..?
ಮರಣ ಅದು ನಿಶ್ಚಿತ.
ಅದೆಷ್ಟೇ ದೊಡ್ಡ ವ್ಯಕ್ತಿಗಳಾದರೂ ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಆದರೂ ಇಂತಹ ಅನಿರೀಕ್ಷಿತ ಮರಣಗಳು ಮಾತ್ರ ಪದೇ ಪದೇ ನಮ್ಮ ಮನಸ್ಸಿನ ಅಂತರಾಳವನ್ನು ಘಾಸಿಗೊಳಿಸುತ್ತಲೇ ಇದೆ.
ನಿನ್ನೆಯವರೆಗೂ ತನ್ನ ಮಗುವನ್ನು ತಬ್ಬಿಕೊಂಡು ಮಲಗಿದ್ದ ಆ ತಾಯಿ, ಇಂದು ಅಪಘಾತಕ್ಕೊಳಗಾಗುವಾಗಲೂ ತನ್ನ ಎದೆಗೆ ಅಪ್ಪಿಕೊಂಡು ನಡೆದಾಡಿದ ತಾಯಿ, ಇಂದು ಆರಡಿ ಮಣ್ಣಿನೊಳಗೆ ಮಲಗುವಾಗಲೂ ಅವರಿಗಾಗಿ ತೋಡಿದ ಕಬರ್ ನೋಡುವಾಗ ಮನುಷ್ಯನಾದವನಿಗೆ ಅದನ್ನು ಸಹಿಸಿಕೊಳ್ಳಲು ತುಂಬಾ ಕಷ್ಟವಿದೆ.
ಸಾಂತ್ವನಗಳು ಅರ್ಥಶೂನ್ಯವಾಗತೊಡಗುತ್ತದೆ.
ಇಂದು ಅವರ ಸರದಿ ನಾಳೆ ನಾವೂ ಕೂಡ ಮರಣಕ್ಕೆ ವಿಧೇಯರಾಗಬೇಕಾದವರೇ.
ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಗಳೂ ಅಧಿಕಗೊಳ್ಳುತ್ತಿದೆ.
ಎಲ್ಲಾ ರೀತಿಯ ಅಪಘಾತಗಳಿಂದ ಸರ್ವಶಕ್ತನು ನಮ್ಮನ್ನು ರಕ್ಷಿಸಲಿ.
ಜೀವ ಕಳೆದುಕೊಂಡ ಕುಟುಂಬಗಳಿಗೆ ಸಹನೆಯನ್ನು ದಯಪಾಲಿಸಲಿ – ಆಮೀನ್.

By dtv

Leave a Reply

Your email address will not be published. Required fields are marked *

error: Content is protected !!