ರಾಹುಲ್ ದ್ರಾವಿಡ್ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಎಎನ್‌ಐ ವರದಿ ಬಿತ್ತರಿಸಿದೆ. ಹಾಲಿ ಕೋಚ್ ರವಿ ಶಾಸ್ತ್ರಿ ಅವರ ಅವಧಿ ಮುಕ್ತಾಯವಾದ ಬಳಿಕ ದ್ರಾವಿಡ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಸದ್ಯ ಭಾರತದ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಆ ಬಳಿಕ ದ್ರಾವಿಡ್ ಅವರು ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಟಿ20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ನವೆಂಬರ್‌ನಲ್ಲಿ ಭಾರತ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ನಡೆಯಲಿದ್ದು, ಕೋಚ್ ಆಗಿ ದ್ರಾವಿಡ್ ಅವರು ತಂಡವನ್ನು ಸೇರಿಕೊಳ್ಳಲಿರುವುದು ಬಹುತೇಕ ಖಚಿತವಾಗಿದೆ ಎಂದು ‘ಇಎಸ್‌ಪಿಎನ್ ಕ್ರಿಕ್ ಇನ್ಫೊ’ ವರದಿ ಮಾಡಿದೆ.
ಇದರ ಬೆನ್ನಲ್ಲೇ ಟೈಮ್ಸ್ ಆಫ್ ಇಂಡಿಯಾ ಕೂಡ ಈ ಬಗ್ಗೆ ವರದಿ ಮಾಡಿದ್ದು, ರಾಹುಲ್ ದ್ರಾವಿಡ್ ಅವರಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಎರಡು ವರ್ಷಗಳ ಗುತ್ತಿಗೆ ನೀಡಲಾಗಿದೆ. ಟಿ20 ವಿಶ್ವಕಪ್ ನಂತರ ಪ್ರಸ್ತುತ ಕೋಚ್ ರವಿಶಾಸ್ತ್ರಿ ಮತ್ತು ಅವರ ಸಹಾಯಕ ಸಿಬ್ಬಂದಿಯ ಅಧಿಕಾರಾವಧಿ ಕೊನೆಗೊಳ್ಳುವುದು ಗಮನಾರ್ಹವಾಗಿದೆ. ಟಿ20 ವಿಶ್ವಕಪ್ ನಂತರ ಮೂರು ದಿನಗಳ ನಂತರ ನವೆಂಬರ್ 17ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧ ತವರಿನ ಸರಣಿಗೆ ರಾಹುಲ್ ದ್ರಾವಿಡ್ ತಂಡದ ಉಸ್ತುವಾರಿ ವಹಿಸಲಿದ್ದಾರೆ.
ಕೋಚ್ ನೇಮಕ ವಿಚಾರವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.