ದಕ್ಷಿಣ ಕನ್ನಡ: ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶಿಶು ಬದಲಿಸಿದ ಆರೋಪ ಕೇಳಿ ಬಂದಿದೆ. ಮಂಗಳೂರಿನ ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ದಾಖಲೆಗಳಲ್ಲಿ ಹೆಣ್ಣು ಮಗು ತೋರಿಸಿ ಗಂಡು ಮಗು ನೀಡಿದ್ದಾರೆ ಎಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಮೂಲದ ಮುಸ್ತಫಾ ದಂಪತಿ ಹೆರಿಗೆ ಆಸ್ಪತ್ರೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 27ರಂದು ಹೆರಿಗೆಯಾಗಿ ಹೆಣ್ಣು ಮಗು ಎಂಬ ಮಾಹಿತಿ ನೀಡಿದ್ದರು. ಮಗುವಿಗೆ ತೀವ್ರ ಅನಾರೋಗ್ಯ ಹಿನ್ನೆಲೆ ಎನ್ಐಸಿಯುಗೆ ದಾಖಲು ಮಾಡಿದ್ದರು. ಆಸ್ಪತ್ರೆಯ ದಾಖಲೆಗಳಲ್ಲೂ ಹೆಣ್ಣು ಮಗು ಎಂದೇ ಉಲ್ಲೇಖವಾಗಿದೆ. ಆದರೆ ಅಕ್ಟೋಬರ್ 14ರಂದು ಡಿಸ್ಚಾರ್ಜ್ ಆದಾಗ ಗಂಡು ಮಗು ನೀಡಿದ್ದಾರೆ ಎಂದು ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಠಾಣೆಗೆ ದಂಪತಿ ದೂರು ನೀಡಿದ್ದಾರೆ.
ಮಗುವನ್ನು ಬದಲಾಯಿಸಿಲ್ಲ -ಮಗುವಿನ ಜನನದ ಸಂದರ್ಭದಲ್ಲಿ ಕೇಸ್ ಶೀಟ್’ನಲ್ಲಿ ಮಗುವಿನ ಲಿಂಗವನ್ನು ದಾಖಲಿಸುವ ಸಂದರ್ಭದಲ್ಲಿ ಎಡವಟ್ಟಾಗಿದೆ. ಆ ತಪ್ಪಿನಿಂದ ಪೋಷಕರಿಗೂ ಗೊಂದಲವಾಗಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ಮಾಡಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಲೇಡಿಗೋಷನ್ ಆಸ್ಪತ್ರೆ ವೈಧ್ಯಕೀಯ ಅಧಿಕ್ಷಕರು ಸ್ಪಷ್ಟನೆ ನೀಡಿದ್ದಾರೆ.