ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್, ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಭಾವನಾತ್ಮಕವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.
ಕಷ್ಟಗಳ ಕೊನೆಯಲ್ಲಿ ಯಾವಾಗಲೂ ವಿಜಯೋತ್ಸವ ಇದ್ದೇ ಇರುತ್ತದೆ. ಬೆಂಕಿ ಇರು ಹಾದಿ ಹಲವು ವಿಷಯಗಳನ್ನು ಸಾಧಿಸುವ ಮಾರ್ಗವಾಗಿದೆ. ಆದರೆ ಪ್ರಯೋಗವು ಎಂದಿಗೂ ಸುಲಭವಲ್ಲ. ಎಲ್ಲಾ ಭರವಸೆಗಳು ಮಸುಕಾದಾಗ, ಜೀವನವೆಂಬ ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ. ನನಗೆ ಆ ಬೆಳಕು ಚಿರು. ನನ್ನ ಪ್ರಯಾಣವು ಪ್ರಕಾಶಮಾನವಾಗಿ ಬೆಳೆಯಲು ಆ ಬೆಳಕಿನ ಕಡೆಗೆ ಸಾಗಬೇಕಾಗಿದೆ.
HAPPY BIRTHDAY DEAR HUSBAND, ನನ್ನ ಜೀವನ, ನನ್ನ ಬೆಳಕು ನೀನು ಎಂದು ಬರೆದುಕೊಂಡು ಮೇಘನಾ ರಾಜ್ ಚಿರು ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಈ ಭಾವನಾತ್ಮಕ ಸಾಲುಗಳನ್ನು ನೋಡಿದ ಕೆಲವು ಅಭಿಮಾನಿಗಳು ಕಣ್ಣೀರು ತುಂಬಿಕೊಂಡಿದ್ದಾರೆ.
ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುತ್ತಿರುವ ಕುರಿತಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಟ ಚಿರಂಜೀವಿ ಸರ್ಜಾ ಅವರು ಅಭಿಮಾನಿಗಳಿಂದ, ಕುಟುಂಬದಿಂದ ದೂರವಾಗಿರಬಹುದು. ಆದರೆ ಅವರು ನಟಿಸಿರುವ ಸಿನಿಮಾಗಳ ಮೂಲಕವಾಗಿ ಎಂದಿಗೂ ಜೀವಂತವಾಗಿದ್ದಾರೆ.
ಚಿರು ಸರ್ಜಾ ಹುಟ್ಟುಹಬ್ಬದ ಹಿನ್ನಲೆ ಪತಿಯ ಸವಿನೆನೆಪಿನಾರ್ಥಕವಾಗಿ ಒಂದು ಫೋಟೋಶೂಟ್ ಮಾಡಿಸಿದ್ದಾರೆ. ರಾಜ ರಾಣಿ ಥೀಮ್‍ನಲ್ಲಿ ಮಾಡಿರುವ ಹೊಸ ಫೋಟೋಶೂಟ್ ಇದಾಗಿದೆ. ರಾಜ ವಿಧಿವಶರಾದ ಬಳಿಕ ರಾಣಿ, ಮಗನಿಗೆ ಆ ರಾಜನ ಬಗ್ಗೆ ತಿಳಿಸುವ ಥೀಮ್ ಅನ್ನು ಫೋಟೋಶೂಟ್ ಒಳಗೊಂಡಿದೆ. ರಾಜನ ನಿಧನದ ಬಳಿಕ ರಾಣಿ ತನ್ನ ಸಾಮ್ರಾಜ್ಯವನ್ನು ಹೇಗೆ ಸಮರ್ಥವಾಗಿ ಮುನ್ನಡೆಸುತ್ತಾಳೆ ಎಂಬ ಥೀಮ್‍ನಲ್ಲಿ ಮೇಘನಾ ಕಾಣಿಸಿಕೊಂಡಿದ್ದಾರೆ.