ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ ರಣರೋಚಕ ಪಂದ್ಯಾಟಕ್ಕೆ ವಿಶ್ವಕಪ್ ವೇದಿಕೆಯಾಗಿ ಸಜ್ಜಾಗುತ್ತಿದೆ. ಈ ನಡುವೆ ಈ ಪಂದ್ಯದ ನೇರ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿ ಜಾಹೀರಾತಿನಲ್ಲಿ ಹಣದ ಹೊಳೆ ನಿರೀಕ್ಷಿಸಿದೆ.
ಪಂದ್ಯ ನಡೆಯುತ್ತಿರುವಾಗ 10 ಸೆಕೆಂಡ್‍ನ ಜಾಹೀರಾತು ದರ ಬರೋಬ್ಬರಿ 30 ಲಕ್ಷ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಬದ್ಧವೈರಿಗಳ ಕಾದಾಟ ನೋಡಲು ಕ್ರಿಕೆಟ್ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಪಂದ್ಯವನ್ನು ಮೈದಾನಕ್ಕೆ ತೆರಳಿ ನೋಡಲು ಆಗದೆ ಇದ್ದವರು, ಟಿವಿ ಮುಂದೆ ಕೂತು ಮಿಸ್ ಮಾಡದೆ ನೋಡುತ್ತಾರೆ. ಹಾಗಾಗಿ ಈ ಪಂದ್ಯವನ್ನು ಪ್ರಸಾರ ಮಾಡುವ ಖಾಸಗಿ, ವಾಹಿನಿ ಪಂದ್ಯದ ವೇಳೆ ಪ್ರಸಾರ ವಾಗುವ ಜಾಹೀರಾತುಗಳನ್ನು ಪ್ರತಿ 10 ಸೆಕೆಂಡ್‍ಗೆ 25 ರಿಂದ 30 ಲಕ್ಷ ರೂ.ಗೆ ಮಾರಾಟ ಮಾಡುತ್ತಿದೆ ಎಂದು ಮೂಲಗಳಿಂದ ವರದಿ ಬಂದಿದೆ.

ಇದು ಭಾರತದ ವಾಹಿನಿಯೊಂದು ಅತಿಹೆಚ್ಚು ಮೊತ್ತಕ್ಕೆ ಜಾಹೀರಾತು ಮಾರಾಟ ಮಾಡಿ ದಾಖಲೆ ಬರೆಯುವ ಸನಿಹದಲ್ಲಿದೆ. ಖಾಸಗಿ ವಾಹಿನಿ ಪ್ರಮುಖವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವಲ್ಲದೆ ಭಾರತ ಆಡಲಿರುವ ಎಲ್ಲಾ ಪಂದ್ಯಗಳ 10 ಸೆಕೆಂಡ್ ಜಾಹೀರಾತಿಗೆ 9 ರಿಂದ 10 ಲಕ್ಷ ರೂ. ನಿಗದಿ ಮಾಡಿದ್ದು, ಈಗಾಗಲೇ ಜಾಹೀರಾತು ಸ್ಲಾಟ್ ಕೂಡ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.
ಜಾಹೀರಾತಿನಿಂದ 270 ಕೋಟಿಗೂ ರೂ. ಹೆಚ್ಚು ಆದಾಯದ ನಿರೀಕ್ಷೆ ಇದೆ. ವಿಶ್ವಕಪ್ ಪಂದ್ಯದ ಇತರ ಪಂದ್ಯಗಳಿಂತ ಭಾರತ ವಿರುದ್ಧ ನಡೆಯಲಿರುವ ಪಂದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಪ್ರತಿ ಬಾರಿ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ. ಈ ಬಾರಿ ವೀಕ್ಷಕರ ಸಂಖ್ಯೆ ಕೂಡ ಏರಿಕೆ ಯಾಗುವ ಸಾಧ್ಯತೆ ಇದ್ದು, ಪ್ರಮುಖವಾಗಿ ಯುವ ಜನರು ಟಿವಿ ಜೊತೆಗೆ ಆನ್‍ಲೈನ್ ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡುವ ಸಾಧ್ಯತೆ ಇದೆ.