ರಾಂಚಿ: ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳಲು ವಿರೋಧಿಸಿದ್ದಕ್ಕೆ ಅಪ್ರಾಪ್ತ ವಯಸ್ಸಿನ ತಂಗಿಯನ್ನೇ ಅಕ್ಕ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.
ಸಹೋದರಿಯರಾದ ರಾಖಿ ದೇವಿ (30), ರೂಪಾ ದೇವಿ (25), ಭಾವ ಧನಂಜಯ ಅಗರವಾಲ (30) ಹಾಗೂ ರಾಖಿ ದೇವಿ ಪ್ರಿಯತಮರಾದ ಪ್ರತಾಪ್ ಕುಮಾರ್ ಸಿಂಗ್, ನಿತೀಶ್ ಕೊಲೆ ಪ್ರಕರಣದ ಆರೋಪಿಗಳು. ತಂಗಿಯನ್ನು ಕೊಲೆ ಮಾಡಿ ಕಾಣೆಯಾಗಿದ್ದಾಳೆಂದು ಆರೋಪಿಗಳು ದೂರು ನೀಡಿದ್ದರು.
ಸುಮಾರು ಏಳು ತಿಂಗಳ ಹಿಂದೆ ಕಾಣೆಯಾಗಿದ್ದಾಳೆ ಎಂದು ಹೇಳಲಾದ 17 ವರ್ಷ ವಯಸ್ಸಿನ ಅಪ್ರಾಪ್ತೆಯ ಮೃತದೇಹ ಝಾರ್ಖಂಡ್‍ನ ಸೋನಾರ್ ಅಣೆಕಟ್ಟೆ ಬಳಿ ಪತ್ತೆಯಾಗಿದೆ. ಮ್ಯಾಜಿಸ್ಟ್ರೇಟರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಆರ್‌ಐಎಂಎಸ್) ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರ ತಲೆಗೆ ತೀವ್ರತರವಾದ ಪೆಟ್ಟು ಬಿದ್ದಿದೆ ಎಂದು ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೊಲೆಯಾದ ಅಪ್ರಾಪ್ತೆಯ ಸಹೋದರಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸದರ್ ಸಿಡಿಪಿಒ ವಿಜಯ್ ಶಂಕರ್, ಕೊಲೆಯಾದ ಅಪ್ರಾಪ್ತೆಯು ತನ್ನ ಕುಟುಂಬದ ಐವರು ಸಹೋದರಿಯರಲ್ಲಿ ಎರಡನೆಯವಳು. ಇವರ ತಂದೆ-ತಾಯಿ ಮರಣವನ್ನಪ್ಪಿದ್ದಾರೆ. ಅಪ್ರಾಪ್ತೆ ತನ್ನ ಅಕ್ಕ ರಾಖಿಯೊಂದಿಗೆ ಸುದ್ನಾ ಬಳಿ ವಾಸವಾಗಿದ್ದಳು. ಅಕ್ಕ ರಾಖಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದಳು ಎಂದು ತಿಳಿಸಿದ್ದಾರೆ.
ಸಹೋದರಿ ರಾಖಿ ಮತ್ತು ಧನಂಜಯ ಇಬ್ಬರೂ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪೀಡಿಸುತ್ತಿದ್ದರು. ಆದರೆ ಅದಕ್ಕೆ ಅಪ್ರಾಪ್ತೆ ವಿರೋಧ ವ್ಯಕ್ತಪಡಿಸಿದ್ದಳು. ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದ ಅಪ್ರಾಪ್ತೆ, ಆತನನ್ನೇ ವಿವಾಹವಾಗಲು ನಿರ್ಧರಿಸಿದ್ದಳು. ಅದನ್ನು ಅಕ್ಕ ರಾಖಿ ವಿರೋಧಿಸಿದ್ದಳು. ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಬಯಸಲು ಸಹೋದರಿ ರಾಖಿಯ ಪ್ರಿಯತಮರಾದ ಪ್ರತಾಪ್, ನಿತೀಶ್ ಆಗಾಗ ಮನೆಗೆ ಬರುತ್ತಿದ್ದರು. ಅದಕ್ಕೆ ರಾಖಿಯೂ ಸಹಾಯ ಮಾಡುತ್ತಿದ್ದಳು.
ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪದಿದ್ದ ಅಪ್ರಾಪ್ತೆಯನ್ನು ಸಹೋದರಿ ರಾಖಿ ಕೊಲೆಗೈದು ನೇಣಿಗೆ ಹಾಕಿದಳು. ನಂತರ ಧನಂಜಯ ಮತ್ತು ರೂಪಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಧನಂಜಯ್ ಆಟೊ-ರಿಕ್ಷಾದೊಂದಿಗೆ ಬಂದಿದ್ದಾನೆ. ಕೊನೆಗೆ ಐವರೂ ಆರೋಪಿಗಳು ಸೇರಿಕೊಂಡು ಮೃತದೇಹವನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದರು ಎಂದು ವಿಜಯ್ ಶಂಕರ್ ವಿವರಿಸಿದ್ದಾರೆ.