dtvkannada

ದುಬೈ: ಭಾರತ-ಪಾಕಿಸ್ತಾನ್ ನಡುವೆ ಭಾನುವಾರ ದುಬೈನಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್​ಗಳಿಂದ ಪಾಕ್​ ವಿರುದ್ದ ಹೀನಾಯವಾಗಿ ಸೋಲನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರನ್ನು ಗುರಿಯಾಗಿಸಿ ಟೀಕೆಗಳು ಕೇಳಿ ಬಂದಿದ್ದವು. ಅದರಲ್ಲೂ ಶಮಿ ಅವರ ಧರ್ಮದವನ್ನು ಎಳೆದು ತಂದು ಅವರನ್ನು ನಿಂದಿಸಲಾಗಿತ್ತು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ವೇಗಿಯನ್ನು ಪಾಕಿಸ್ತಾನದವ…ಎಂದೆಲ್ಲಾ ಟ್ರೋಲ್ ಮಾಡಲಾಗಿತ್ತು. ಈ ಟ್ರೋಲ್​ಗಳಿಗೆ ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಶಮಿ ವಿರುದ್ದದ ಕೋಮು ನಿಂದನೆಯನ್ನು ಖಂಡಿಸಿದ್ದಾರೆ. ಒಂದು ಧರ್ಮವನ್ನು ಗುರಿಯಾಗಿಸಿ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಹೀನಾಯ ಕೃತ್ಯ. ಏಕೆಂದರೆ ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು ಎಂದು ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಹೇಳಿದರು.

ಧರ್ಮದ ಆಧಾರದಲ್ಲಿ ಆಟಗಾರರನ್ನು ನೋಡುವುದು ಸಂಪೂರ್ಣ ತಪ್ಪು. ನಾನು ಯಾರೊಂದಿಗೂ ಈ ರೀತಿ ವರ್ತಿಸಿಲ್ಲ. ಆದರೆ ಇದು ಕೆಲವರ ಕೆಲಸ. ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಪ್ರಮುಖ ಭಾಗ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಜೊತೆ ಶೇಕಡಾ 200 ರಷ್ಟು ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ತಿಳಿಸಿದರು.

ಇದೇ ವೇಳೆ ನಮ್ಮದು ಮೈದಾನದಲ್ಲಿ ಆಡುತ್ತಿರುವವರ ಗುಂಪು ಎಂದ ಕೊಹ್ಲಿ, ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡುವತ್ತಾ ಕೂರುವ ಬೆನ್ನುಮೂಳೆಯಿಲ್ಲದ ಜನರ ಗುಂಪಲ್ಲ ಎಂದು ತಿಳಿಸಿದರು. ಈ ಮೂಲಕ ವೈಯುಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟೀಕೆ ಮಾಡುವವರಿಗೆ ಕೊಹ್ಲಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದರು.

By dtv

Leave a Reply

Your email address will not be published. Required fields are marked *

error: Content is protected !!