ಸಂಪಾಜೆ (ಕಲ್ಲುಗುಂಡಿ): ಮಕ್ಕಳ ಹಾಜರಾತಿ ಇಲ್ಲದೆ ರಾಜ್ಯದ ಹಲವು ಶಾಲೆಗಳು ಮುಚ್ಚಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ತಾವು ಓದಿದ ಸರಕಾರಿ ಕನ್ನಡ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಕಲಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.
ಹೌದು, ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿಯ ಹಳೆ ವಿದ್ಯಾರ್ಥಿಗಳ ತಂಡವೇ ಇಂತಹದ್ದೊಂದು ಮಾದರಿ ಹೆಜ್ಜೆಯನ್ನಿಟ್ಟು ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.
ವಿದ್ಯಾರ್ಥಿಗಳು ಒಂದಾಗಿದ್ದು ಹೇಗೆ?
ನಮ್ಮೂರ ಶಾಲೆಯನ್ನು ಉಳಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ವಾಟ್ಸಪ್ ನಲ್ಲಿ ನೂರಕ್ಕೂ ಹೆಚ್ಚಿನ ಹಳೆ ವಿದ್ಯಾರ್ಥಿಗಳ ತಂಡ ಒಂದಾಯಿತು, ಶಾಲೆಯ ಅಧ್ಯಾಪಕ ಬಳಗ, ಊರಿನ ಗುರು-ಹಿರಿಯರ ಮಾರ್ಗದರ್ಶನ ಪಡೆದು ಶಾಲೆಯ ಸಬಲೀಕರಣಕ್ಕೆ ಮುಂದಾಯಿತು. ಊರಿನ ಶಾಲೆಯ ಮೂಲಭೂತ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು, ಮಕ್ಕಳಿಗೆ ಓದಲು ಪೂರಕ ವಾತಾವರಣ ನಿರ್ಮಿಸುವುದು. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಕಲ್ಲುಗುಂಡಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವುದೇ ಹಳೆ ವಿದ್ಯಾರ್ಥಿಗಳ ತಂಡದ ಪ್ರಮುಖ ಧ್ಯೇಯೋದ್ದೇಶವಾಗಿತ್ತು.
ಕರೋನಾ ಸವಾಲು ಮೆಟ್ಟಿ ನಿಂತರು
ನಮ್ಮೂರ ಶಾಲೆ ಉಳಿಸೋಣ ತಂಡ ಉಳಿಸೋಣ ವಾಟ್ಸಪ್ ಅಭಿಯಾನದ ನೇತೃತ್ವವನ್ನು ಪತ್ರಕರ್ತ ಹೇಮಂತ್ ಸಂಪಾಜೆ ವಹಿಸಿಕೊಂಡಿದ್ದರು. ಇವರಿಗೆ ಮಿತ್ರರಾದ ವಿನಯ್ ಸುವರ್ಣ, ಶರತ್ ಕೈಪಡ್ಕ ಸಾಥ್ ನೀಡಿದರು. ಕರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದರಿಂದ ಹೊರಗೆಲ್ಲೂ ಹೋಗುವ ಪರಿಸ್ಥಿತಿ ಇರಲಿಲ್ಲ. ಧನ ಸಂಗ್ರಹಿಸುವುದು ಹೇಗೆ ಎನ್ನುವ ಸವಾಲು ಎದುರಾಯಿತು. ಈ ಸಂದರ್ಭದಲ್ಲಿ ವಾಟ್ಸಪ್ ನಲ್ಲಿಯೇ ಎಲ್ಲವನ್ನೂ ನಿಭಾಯಿಸಲಾಯಿತು. ಹಣದ ಖರ್ಚು ವೆಚ್ಚ, ತೆಗೆದುಕೊಂಡ ಮೆಟಿರಿಯಲ್ ಗಳ ಬಿಲ್, ದಾನಿಗಳ ವಿವರ ಸೇರಿದಂತೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕೆಲಸ ಮಾಡಿ ಮುಗಿಸಲಾಯಿತು.
ತಂಡವು ಸಂಘಟಿತವಾಗಿ ರಚನಾತ್ಮಕ ಕಾರ್ಯ ವೈಖರಿಗೆ ಮುಂದಾಯಿತು. ಯಾರನ್ನೂ ಮುಖತಃ ಭೇಟಿಯಾಗದೆ ಕೇವಲ ವಾಟ್ಸಪ್ ಮೂಲಕ ನಮ್ಮೂರ ಶಾಲೆ ಉಳಿಸೋಣ ತಂಡ ಕೇವಲ 50 ದಿನಗಳಲ್ಲಿ 2 ಲಕ್ಷದ 41 ಸಾವಿರದ 741 ರೂ. ಸಂಗ್ರಹಿಸಿತು. ಕರೋನಾ ಸಂಕಷ್ಟದ ಸಂದರ್ಭದಲ್ಲೂ ಶಾಲೆಗೆ ಹಲವು ಮಂದಿ ಧನ ಸಹಾಯ ಮಾಡಿ ಹೃದಯ ಶ್ರೀಮಂತಿಕೆ ಮೆರೆದದ್ದು ವಿಶೇಷವಾಗಿತ್ತು.
ನಿಮ್ಮ ಊರಿನ ಶಾಲೆಯನ್ನೂ ಉಳಿಸಿ
ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಪ್ರಸ್ತಾವನೆ ಸದ್ಯ ರಾಜ್ಯ ಸರ್ಕಾರದ ಮುಂದಿದೆ. ನಮ್ಮ ಊರಿನಲ್ಲಿ ಅಂತಹ ಪರಿಸ್ಥಿತಿ ಬರಬಾರದು, ನಾವು ಓದಿದ ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಮುಚ್ಚಬಾರದು. ಭವಿಷ್ಯದಲ್ಲೂ ಶಿಕ್ಷಣಾಂಮೃತವನ್ನು ಕಲ್ಲುಗುಂಡಿಯ ಶಾಲೆ ನಿರಂತರವಾಗಿ ಬಡ ವಿದ್ಯಾರ್ಥಿಗಳಿಗೆ ಉಣಬಡಿಸಬೇಕೆನ್ನುವ ಕನಸನ್ನಿಟ್ಟುಕೊಂಡ ಹಳೆ ವಿದ್ಯಾರ್ಥಿಗಳ ತಂಡ ಇಂತಹ ಕಾರ್ಯಕ್ಕೆ ಮುಂದಾಗಿದೆ.
ಕನಸು ಹುಟ್ಟಿದ್ದೇಗೆ?
ಕಲ್ಲುಗುಂಡಿ ಶಾಲೆಯಲ್ಲಿ ಇಂತಹದ್ದೊದು ಕೆಲಸವನ್ನು ಮಾಡಬೇಕು ಅನ್ನುವ ಕನಸಿನ ಆರಂಭದ ಹಿಂದೆ ಇರುವುದು ಪತ್ರಕರ್ತ ಹೇಮಂತ್ ಸಂಪಾಜೆ ಹಾಗೂ ವಿನಯ್ ಸುವರ್ಣ. ಇಬ್ಬರು ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ್ದಾಗ ಶಾಲೆಯ ಮೂಲಸೌಲಭ್ಯ ಕುಸಿದಿರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಬೇಕು ಎಂದು ತಕ್ಷಣ ದೃಢ ಸಂಕಲ್ಪ ಮಾಡಿದ ಅವರಿಬ್ಬರು ‘ನಮ್ಮೂರ ಶಾಲೆ ಉಳಿಸೋಣ’ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ತೆರೆದರು. ಜಾಲತಾಣದ ಮೂಲಕಕ ಹಳೆ ವಿದ್ಯಾರ್ಥಿಗಳನ್ನು ಒಂದುಗೂಡಿಸಿದರು. ‘ನಮ್ಮೂರ ಶಾಲೆ ಉಳಿಸೋಣ’ ಎಂಬ ವಾಟ್ಸಪ್ ಗುಂಪನ್ನು ಸೇರುವಂತೆ, ಓದಿದ ಶಾಲೆಯನ್ನು ಉಳಿಸುವಂತೆ ಮನವಿ ಮಾಡಿದರು. ಇದಕ್ಕೆ ಹಳೆ ವಿದ್ಯಾರ್ಥಿಗಳು, ಊರಿನ ಹಾಗೂ ಪರವೂರಿನ ದಾನಿಗಳು ಸಹಾಯ ಹಸ್ತ ಚಾಚಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಿಜಿಎಂ (ನಿವೃತ್ತ) ರಮೇಶ್ ತೆಂಕಿಲ್ ಹಾಗೂ ಅವರ ತಂಡ, ಸಿನಿಮಾ ನಟ- ಬಾಡಿಬಿಲ್ಡರ್ ಎ.ವಿ.ರವಿ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ನಿರೂಪಕಿ ರೀನಾ ಡಿಸೋಜಾ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎನ್ ಕೆ ಶಿವಣ್ಣ, ಪ್ರೊ ಕಬಡ್ಡಿ ರೆಫ್ರಿ ಉಸ್ನಾ ನವಾಜ್, ಮಾಜಿ ಕಬಡ್ಡಿ ಆಟಗಾರರಾದ ಬಿಸಿ ರಮೇಶ್, ಮಾಜಿ ಕಬಡ್ಡಿ ತಾರೆ ಪ್ರಸಾದ್ ಬಾಬು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ ವೆಂಕಟೇಶ್, ಐಪಿಎಲ್ ಕ್ರಿಕೆಟ್ ನ ಪ್ರಮುಖ ತಂಡವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫಿಸಿಯೋ ಡಾ ಶ್ರವಣ್, ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ ಚಂದ್ರಶೇಖರ ದಾಮ್ಲೆ ಸೇರಿದಂತೆ ಪರವೂರಿನ ಹಲವು ಜನರು ಧನ ಸಹಾಯ ನೀಡಿ ಅಭಿಯಾನಕ್ಕೆ ಶಕ್ತಿ ತುಂಬಿದರು. ಹಳೆ ವಿದ್ಯಾರ್ಥಿಗಳಾದ ವಸಂತ್ ರೈ ಬಿವಿ ಸಂಪಾಜೆ, ಜಯಾನಂದ ಸಂಪಾಜೆ, ದಾಮೋದರ ಮಾಸ್ಟರ್ ಗೂನಡ್ಕ, ಸವೀತಾ ಟೀಚರ್, ಶಶಿಕಲಾ ಟೀಚರ್ ಹಳೆ ವಿದ್ಯಾರ್ಥಿಗಳ ತಂಡದ ಪ್ರಯತ್ನವನ್ನು ಬೆಂಬಲಿಸಿದರು.
2,41,741.00 ರೂ. ಮೌಲ್ಯದ ವಸ್ತು ಹಸ್ತಾಂತರ
ಕಲ್ಲುಗುಂಡಿ ಸರಕಾರಿ ಶಾಲೆಗೆ ಒಟ್ಟು 2,41,741.00 ರೂ. ಮೌಲ್ಯದ ವಸ್ತು ಹಸ್ತಾಂತರ ಮಾಡಲಾಗಿದೆ. 4 ಸಿಟಿಟಿವಿ, 1 ಇನ್ವರ್ಟರ್, ತಲಾ 26 ಬೆಂಚ್-ಡೆಸ್ಕ್, 8 ಫ್ಯಾನ್ ಕೊಡುಗೆಯಾಗಿ ನೀಡಲಾಗಿದೆ. ಸಿಸಿ ಕ್ಯಾಮರಾ ಅಳವಡಿಕೆ: ರೂ. 32,050 , ಇನ್ವರ್ಟರ್ -ಯುಪಿಎಸ್ ಗೆ :ರೂ.13,500, ಬೆಂಚ್-ಡೆಸ್ಕ್ : ರೂ .1,59,300, ಎಂಟು ಫ್ಯಾನ್ ಖರೀದಿ: ರೂ. 10,800 , ಲಾರಿ ಬಾಡಿಗೆ: ರೂ.16,000/-ನಾಮಫಲಕ ಡಿಸೈನ್:3700 ರೂ ಆಗಿದೆ. ಸದ್ಯ 6,391 ರೂ. ಉಳಿದಿದೆ. ಫ್ಯಾನ್ ಅಳವಡಿಕೆ ಮಾಡಿರುವ ಇಲೆಕ್ಟ್ರಿಷಿಯನ್ ನವೀನ್ ಇನ್ನೂ ಬಿಲ್ ಕ್ಲೀಯರ್ ಮಾಡದಿರುವುದರಿಂದ ಹಣ ನೀಡಲು ಸಾಧ್ಯವಾಗಿಲ್ಲ. ಆತ ಹಣದ ಬಿಲ್ ನೀಡಿದ ಬಳಿಕವಷ್ಟೇ ಅಂತಿಮವಾಗಿ ಉಳಿಯುವ ನಗದಿನ ಮೊತ್ತವನ್ನು ತಿಳಿಯಬಹುದಾಗಿದೆ. ಅದನ್ನು ಗ್ರೂಪ್ ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಲೆಕ್ಕಾಚಾರದ ನೇತೃತ್ವ ವಹಿಸಿದ ವಿನಯ್ ಸುವರ್ಣ ತಿಳಿಸಿದ್ದಾರೆ.