ಮಂಗಳೂರು: ವಾರದ ಹಿಂದೆ ವೈರಲ್ ಆಗಿದ್ದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ಆಮಂತ್ರಣ ಪತ್ರಿಕೆ ಸಂಬಂಧಿಸಿ, ಹಿಂದು ಸಂಘಟನೆಗಳ ನಾಯಕರು ಯುವತಿಯ ಮನೆಗೆ ತೆರಲಿ ಮನವೊಲಿಸಿದ್ದಾರೆ.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಹಿಂದು ಸಂಘಟನೆಗಳ ನಾಯಕರು ಮುಸ್ಲಿಂ ಯುವಕನನ್ನು ಮದುವೆಯಾಗಲು ತಯಾರಾಗಿದ್ದ ಯುವತಿಯ ಮನೆಗೆ ತೆರಳಿ, ಮನವೊಲಿಕೆ ಮಾಡಿದ್ದಾರೆ . ಪಾಂಡೇಶ್ವರದ ಯುವತಿಯ ಮನೆಗೆ ತೆರಳಿದ ಸ್ವಾಮೀಜಿ , ಯುವತಿ ಮತ್ತು ಆಕೆಯ ಹೆತ್ತವರಲ್ಲಿ ಮಾತನಾಡಿದ್ದಾರೆ.
ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿ ಯುವಕ- ಯುವತಿಯ ಪರಿಚಯ ಪ್ರೀತಿಗೆ ತಿರುಗಿತ್ತು. ಅದರಂತೆ, ಹಿಂದು ಯುವತಿಯನ್ನು ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ಜಾಫರ್ ಎಂಬಾತ ಮದುವೆಯಾಗಲು ತಯಾರಿ ನಡೆದಿತ್ತು. ನ .29 ರಂದು ಕಣ್ಣೂರಿನ ಬೀಚ್ ರೆಸಾರ್ಟ್ ಒಂದರಲ್ಲಿ ಮದುವೆ ರಿಸೆಪ್ಟನ್ ನಡೆಯುವ ಬಗ್ಗೆ ಆಮಂತ್ರಣ ಪತ್ರ ವೈರಲ್ ಆಗಿತ್ತು. ಯುವತಿಯ ಹೆತ್ತವರು ಮತ್ತು ಯುವಕನ ಜೊತೆಗಿದ್ದ ಆಕೆಯ ಫೋಟೋ ಕೂಡ ವೈರಲ್ ಆಗಿದ್ದು ಹಿಂದು ಸಂಘಟನೆ ಕಾರ್ಯಕರ್ತರಿಂದ ಆಕ್ರೋಶವೂ ಕೇಳಿಬಂದಿತ್ತು.
ಇದರ ಬೆನ್ನಲ್ಲೇ, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಂಘಟನೆಯ ನಾಯಕರು ವಜ್ರದೇಹಿ ಸ್ವಾಮೀಜಿ ನೇತೃತ್ವದಲ್ಲಿ ಯುವತಿ ಮನೆಗೆ ಭೇಟಿ ನೀಡಿದ್ದು, ಮುಸ್ಲಿಂ ಯುವಕನನ್ನು ಮದುವೆಯಾಗದಂತೆ ಮನವೊಲಿಸಿದ್ದಾರೆ. ಯುವತಿ ಮನೆಯವರು ವಜ್ರದೇಹಿ ಸ್ವಾಮೀಜಿಗಳ ಮಾತಿಗೆ ಒಪ್ಪಿದ್ದು, ಸದ್ಯಕ್ಕೆ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ.
ವಜ್ರದೇಹಿ ಸ್ವಾಮೀಜಿ ಜೊತೆಗೆ ವಿಎಚ್ ಪಿ ನಾಯಕರಾದ ಶರಣ್ ಪಂಪೈಲ್ , ಭುಜಂಗ ಕುಲಾಲ್, ಶಿವಾನಂದ ಮೆಂಡನ್ ಸೇರಿದಂತೆ ಯುವತಿಯ ಹತ್ತಿರದ ಸಂಬಂಧಿಕರು ಇದ್ದರು.