ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ನಾಲ್ಕು ವಿಕೆಟ್ ಅಂತರದಿಂದ ಮಣಿಸಿದ ತಮಿಳುನಾಡು ಪಡೆ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಕೊನೇ ಎಸೆತದಲ್ಲಿ ಐದು ರನ್ ಬೇಕಿದ್ದಾಗ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಾರುಕ್ ಖಾನ್ ಸಿಕ್ಸರ್ ಸಿಡಿಸಿ ಕರ್ನಾಟಕದ ಕೈಯಿಂದ ಜಯ ಕಸಿದುಕೊಂಡರು.
ಹೀಗಾಗಿ 2018–19 ಮತ್ತು 2019–20ರಲ್ಲಿ ಪ್ರಶಸ್ತಿ ಗೆದ್ದಿದ್ದ ಕರ್ನಾಟಕದ ‘ಹ್ಯಾಟ್ರಿಕ್’ ಆಸೆ ಕೈಗೂಡಲಿಲ್ಲ.ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 151 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ವಿಜಯ್ ಶಂಕರ್ ಪಡೆ, ಅಂತಿಮ ಎಸೆತದವರೆಗೂ ಹೋರಾಡಿ ಜಯ ದಕ್ಕಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಮನೀಷ್ ಪಾಂಡೆ ಬಳಗದ ಆರಂಭ ಉತ್ತಮವಾಗಿರಲಿಲ್ಲ. ಸೆಮಿಫೈನಲ್ ಪಂದ್ಯದ ಹೀರೋ ರೋಹನ್ ಕದಂ ಇಲ್ಲಿ ಸೊನ್ನೆ ಸುತ್ತಿದರು. ತಂಡದ ಮೊತ್ತ 32 ರನ್ ಆಗಿದ್ದ ವೇಳೆ ಪಾಂಡೆ (13) ಮತ್ತು ಕರುಣ್ ನಾಯರ್ (18) ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟರು. ಬಳಿಕ ಬಂದ ಬಿ.ಆರ್.ಶರತ್ 16 ರನ್ ಗಳಿಸಿ ವಿಕೆಟ್ ಕೈ ಚೆಲ್ಲಿದರು.ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಚೆನ್ನಾಗಿ ಬ್ಯಾಟ್ ಬೀಸಿದ ಅಭಿನವ್ ಮನೋಹರ್ (46) ಹಾಗೂ ಪ್ರವೀಣ್ ದುಬೆ (33) ಸವಾಲಿನ ಮೊತ್ತ ಕಲೆಹಾಕಲು ನೆರವಾದರು.
ಈ ಮೊತ್ತ ಬೆನ್ನತ್ತಿದ ತಮಿಳುನಾಡಿಗೆ ಎನ್.ಜಗದೀಶನ್ ಮತ್ತು ಶಾರುಕ್ ಖಾನ್ ನೆರವಾದರು. ಜಗದೀಶನ್ ಅಗ್ರ ಕ್ರಮಾಂಕದಲ್ಲಿ ನಿಧಾನಗತಿಯ ಆಟವಾಡಿದರೂ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅವರು 46 ಎಸೆತಗಳಲ್ಲಿ 41 ರನ್ ಗಳಿಸಿದರು.
16ನೇ ಓವರ್‌ನಲ್ಲಿ ಜಗದೀಶನ್ ಔಟಾದಾಗ ತಂಡದ ಮೊತ್ತ 4 ವಿಕೆಟ್‌ಗೆ 97ರನ್ ಆಗಿತ್ತು. ಹೀಗಾಗಿ ತಮಿಳುನಾಡಿಗೆ ಕೊನೇ ನಾಲ್ಕು ಓವರ್‌ಗಳಲ್ಲಿ ಗೆಲ್ಲಲು 55 ರನ್‌ಗಳ ಅಗತ್ಯವಿತ್ತು.ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಾರುಖ್, ಕೇವಲ 15 ಎಸೆತಗಳಲ್ಲಿ ಒಂದು ಫೋರ್ ಮತ್ತು ಮೂರು ಸಿಕ್ಸರ್ ಸಹಿತ 33 ರನ್ ಚಚ್ಚಿದರು. ಅಂತಿಮ ನಾಲ್ಕು ಓವರ್‌ಗಳಲ್ಲಿ ಬರೋಬ್ಬರಿ 9 ಇತರೆ ರನ್ ಕೊಡುಗೆ ನೀಡಿದ್ದು ಕರ್ನಾಟಕಕ್ಕೆ ಮುಳುವಾಯಿತು.
WHAT. A. FINISH! 👌 👌
— BCCI Domestic (@BCCIdomestic) November 22, 2021
A last-ball SIX from @shahrukh_35 does the trick! 💪 💪
Tamil Nadu hold their nerve & beat the spirited Karnataka side by 4 wickets to seal the title-clinching victory. 👏 👏 #TNvKAR #SyedMushtaqAliT20 #Final
Scorecard ▶️ https://t.co/RfCtkN0bjq pic.twitter.com/G2agPC795B