dtvkannada

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ಭಾರತ ತಂಡ ಇದೀಗ ಟೆಸ್ಟ್ ಸರಣಿ ಮೇಲೆ ಕಣ್ಣಿಟ್ಟಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಇಂದಿನಿಂದ ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ.

ಅಜಿಂಕ್ಯಾ ರಹಾನೆ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದು, ಶ್ರೇಯಸ್ ಅಯ್ಯರ್ ಟೆಸ್ಟ್​ಗೆ ಪದಾರ್ಪಣೆ ಮಾಡಲಿದ್ದಾರೆ. ನ್ಯೂಜಿಲೆಂಡ್ ತಂಡ ಟಿ20 ಸರಣಿಯಲ್ಲಿ ಅನುಭವಿಸಿದ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳುವ ಕಾತುರದಲ್ಲಿದ್ದರೆ, ಇತ್ತ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಸೋತಿದ್ದಕ್ಕೆ ತಕ್ಕ ಉತ್ತರ ನೀಡಲು ತಯಾರಾಗಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ ಮತ್ತು ಗಾಯಗೊಂಡಿರುವ ಕೆಎಲ್. ರಾಹುಲ್ ಅವರಿಲ್ಲದೇ ಕಣಕ್ಕಿಳಿಯುತ್ತಿರುವ ತಂಡದಲ್ಲಿ ಯುವ ಆಟಗಾರರಿಗೆ ಮಿಂಚಲು ಅವಕಾಶ ಲಭಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಶುಭ್ಮನ್ ಗಿಲ್ ಇನಿಂಗ್ಸ್ ಆರಂಭಿಸುವರು. ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವುದು ಖಚಿತವಾಗಿದೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಕ್ರೀಸ್‌ಗೆ ಬರುವುದು ಖಚಿತ. ಸುಮಾರು ಒಂದು ವರ್ಷದಿಂದ ಶತಕದ ಬರ ಎದುರಿಸುತ್ತಿರುವ ಪೂಜಾರ ಇಲ್ಲಿ ಮತ್ತೆ ಲಯಕ್ಕೆ ಮರಳುವ ನಿರೀಕ್ಷೆ ಇದೆ.

ಭಾರತ ತಂಡ ಕಾನ್ಪುರದಲ್ಲಿ ಇದುವರೆಗೆ 22 ಟೆಸ್ಟ್ ಆಡಿದ್ದು, 7ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 12 ಟೆಸ್ಟ್ ಡ್ರಾಗೊಂಡಿದೆ. ನ್ಯೂಜಿಲೆಂಡ್ ತಂಡ ಕಾನ್ಪುರದಲ್ಲಿ ಇದುವರೆಗೆ 3 ಟೆಸ್ಟ್ ಆಡಿದ್ದು, 2ರಲ್ಲಿ ಸೋತು, 1ರಲ್ಲಿ ಡ್ರಾ ಸಾಧಿಸಿದೆ. ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದ್ದು, 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

By dtv

Leave a Reply

Your email address will not be published. Required fields are marked *

error: Content is protected !!