ಉಡುಪಿ: ಮಾರುತಿ ಸ್ವಿಫ್ಟ್ ಕಾರು ಮೀನು ಸಾಗಾಟದ ರಿಕ್ಷಾ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಮೀನು ಮಾರಾಟಗಾರರೋರ್ವರು ಸಾವನ್ನಪ್ಪಿದ್ದಾರೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಯಡ್ತಾಡಿಯ ಮಲಸಾವರಿ ದೇವಸ್ಥಾನದ ಬಳಿಯಲ್ಲಿ ಇಂದು ನಡೆದಿದೆ.
ಬ್ರಹ್ಮಾವರ ತಾಲೂಕಿನ ಅಚ್ಲಾಡಿಯ ಮಾನಂಬಳ್ಳಿ ನಿವಾಸಿ ಸುರೇಶ್ ಮೃತ ದುರ್ದೈವಿ.
ರಿಕ್ಷಾದಲ್ಲಿದ್ದ ರಾಜು ಹಾಗೂ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಾಯಿಬ್ರಕಟ್ಟೆಯ ಕಡೆಯಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದೆ, ನಂತರ ಚಾಲಕನ ನಿಯಂತ್ರಣ ತಪ್ಪಿ ಕಾರು ಮಲ್ಪೆಯಿಂದ ಮೀನು ತುಂಬಿಸಿಕೊಂಡು ಬರುತ್ತಿದ್ದ ಅಪೆ ರಿಕ್ಷಾಕ್ಕೆ ಢಿಕ್ಕಿಯಾಗಿದ್ದು ಸ್ಥಳದಲ್ಲಿಯೇ ಮೀನುಗಾರ ಸುರೇಶ್ ಸಾವನ್ನಪ್ಪಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.