ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದ ಟೀಂ ಇಂಡಿಯಾ ನಾಲ್ಕನೇ ದಿನದ ಆರಂಭದಲ್ಲೇ ಪಂದ್ಯ ಮುಗಿಸಿದೆ. 372 ರನ್ ಅಂತರದಿಂದ ಪಂದ್ಯ ಜಯಿಸಿದ ಭಾರತ ತಂಡ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.
ಇಂದು ನಾಲ್ಕನೇ ದಿನ ಜಯಂತ್ ಯಾದವ್ ನ್ಯೂಜಿಲೆಂಡ್ಗೆ ಮಾರಕವಾಗಿ ಪರಿಣಮಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಹೆನ್ರಿ ನಿಕೋಲ್ಸ್ ಮತ್ತು ರಚಿನ್ ರವೀಂದ್ರ ಇನ್ನಿಂಗ್ಸ್ ಆರಂಭಿಸಿದ ಕೆಲವೇ ಓವರ್ಗಳಲ್ಲಿ ಬೌಲಿಂಗ್ ಮಾಡಲು ಬಂದ ಜಯಂತ್ ನಾಲ್ಕನೇ ದಿನದ ಹೀರೋ ಆದರು.
ಈ ಮೂಲಕ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲೆಂಡ್ ತನ್ನ ಹಳೇ ಕೆಟ್ಟ ದಾಖಲೆಯನ್ನು ಈ ಬಾರಿಯೂ ಮುಂದುವರೆಸಿದೆ. ರಾಂಚಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.
ಈ ಪಂದ್ಯದಲ್ಲಿ ಮೊದಲು ಮಳೆ ಕಾಟದ ನಡುವೆಗೂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 325 ರನ್ ಗಳಿಸಿ, ಬಳಿಕ ಕಿವೀಸ್ ಪಡೆಯನ್ನು ಪ್ರಥಮ ಇನಿಂಗ್ಸ್ನಲ್ಲಿ 62 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಮಾಡಿತು. ಫಾಲೋ ಆನ್ ಹೇರದೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್ಗಳಿಸಿತ್ತು.
ಮೂರನೇ ದಿನದಾಟ ಆರಂಭಿಸಿದ ಭಾರತ ಪರ ಮಯಾಂಕ್ ಅಗರ್ವಾಲ್ (62ರನ್, 108 ಎಸೆತ, 9ಬೌಂಡರಿ, 1 ಸಿಕ್ಸರ್) ಹಾಗೂ ಚೇತೇಶ್ವರ ಪೂಜಾರ (47 ರನ್, 97 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿ ಉತ್ತಮ ಲಯ ಕಂಡುಕೊಂಡಿತು. ಇದರ ನಡುವೆಯೂ ಅಜಾಜ್ ಪಟೇಲ್ (106ಕ್ಕೆ 4) ಹಾಗೂ ರಚಿನ್ ರವೀಂದ್ರ (56ಕ್ಕೆ 3) ಮಾರಕ ದಾಳಿಯಿಂದ ಗಮನಸೆಳೆದರು. ಬಳಿಕ ಉತ್ತಮ ಟಾರ್ಗೆಟ್ ಪೇರಿಸಿದ ಹಿನ್ನೆಲೆಯಲ್ಲಿ ಭಾರತ ತಂಡ 7 ವಿಕೆಟ್ಗೆ 276 ರನ್ಗಳಿಸಿ ಎರಡನೇ ಇನಿಂಗ್ಸ್ಗೆ ಡಿಕ್ಲೇರ್ ಘೋಷಿಸಿತ್ತು.